ಮಳೆ, ಬೆಳೆಗಾಗಿ ಜೋಕುಮಾರಸ್ವಾಮಿಯ ಜಪ

JOKUMAR
ಕಂಪ್ಲಿಯ ಮನೆಯೊಂದರ ಮುಂದೆ ಜೋಕುಮಾರನ ಇರಿಸಿ ಹಾಡು ಹಾಡುತ್ತಿರುವುದು. ಅರ್ಚಕಿ ಮಂಜುಳಾ ಶಂಕ್ರಪ್ಪ, ಲಕ್ಷ್ಮೀ, ಬಸಮ್ಮ, ದೇವಮ್ಮ, ಸುಮಂಗಳ ಇತರರಿದ್ದಾರೆ.
Published on

ಕಂಪ್ಲಿ:ರೈತರ ಬೆಳೆ ಸಂರಕ್ಷಿಸುತ್ತಾನೆಂಬ ನಂಬಿಕೆಯಿಂದ ಜೋಕುಮಾರ ಆಚರಣೆ ತಾಲೂಕಿನಾದ್ಯಂತ ನಡೆಯುತ್ತಿದ್ದು, ಜನಪದೀಯ ವೈಶಿಷ್ಠ್ಯ ಹೊಂದಿದೆ. ತಾಲೂಕಿನ ಕಂಪ್ಲಿ-ಕೋಟೆ, ರಾಮಸಾಗರ, ಸಮೀಪದ ದರೋಜಿ ಗ್ರಾಮದ ಗಂಗಾಮತಸ್ಥರ ಮನೆಯಲ್ಲಿ ಜೋಕುಮಾರಸ್ವಾಮಿ ಜನಿಸುತ್ತಾನೆ.

ಎಣ್ಣೆ, ಹುತ್ತಿನಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜಿಸಿ ಅಲಂಕರಿಸುತ್ತಾರೆ. ತಾಲೂಕಿನ ಕೋಟೆ ಮತ್ತು ರಾಮಸಾಗರದ ಗಂಗಾಮತಸ್ಥರ ಮನೆಯಲ್ಲಿ ಜೋಕುಮಾರಸ್ವಾಮಿ ಬೆನಕನ ಆಮಾವಾಸ್ಯೆ ನಂತರದ ಪಂಚಮಿಯಂದು ಜನಿಸುತ್ತಾನೆ.

ಕೋಟೆಯ ಮಂಜುಳಾ ಶಂಕ್ರಪ್ಪ ನೇತೃತ್ವದಲ್ಲಿ ಲಕ್ಷ್ಮೀ, ಬಸಮ್ಮ, ದೇವಮ್ಮ, ಸುಮಂಗಳ, ಅಕ್ಕಮ್ಮ, ದೊಡ್ಡಲಕ್ಷ್ಮೀ, ಸುಶ್ಮಾ, ರಾಮಸಾಗರದ ಬಾರಿಕೇರ ಹುಲಿಗೆಮ್ಮ ನೇತೃತ್ವದಲ್ಲಿ ನೀಲಮ್ಮ, ಹಂಪಮ್ಮ, ರಾಮಮ್ಮ, ಲಕ್ಷ್ಮಮ್ಮ, ದುರುಗಮ್ಮ, ಶಂಕ್ರಮ್ಮ, ಹುಲಿಗೆಮ್ಮ, ರೇವತಿ, ಈರಮ್ಮ ಜೋಕುಮಾರನನ್ನು ಮೆರಸುತ್ತಾರೆ. ಹನ್ನೊಂದು ದಿನ ತಾಲೂಕಿನಾದ್ಯಂತ ಜೋಕುಮಾರನ ಹೊತ್ತು ಮೆರಸುತ್ತ ಮನೆಮನೆಗೆ ತೆರಳುತ್ತಾರೆ. ಪುಟ್ಟಿಯಲ್ಲಿ ಹೊತ್ತೊಯ್ಯುವ ಜೋಕುಮಾರನಿಗೆ ಮನೆಯವರು ಕಾಣಿಕೆಯೊಂದಿಗೆ ಅಡಿಕೆ, ಎಲೆ, ಅಕ್ಕಿ, ಜೋಳ, ಕಾಳುಕಡಿ, ಎಣ್ಣೆ, ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಅನ್ನಸಂತರ್ಪಣೆಗೆ ನೀಡುತ್ತಾರೆ.

ರೈತರ ಬೆಳೆ ಉಳಿಸಿ ಮಳೆ ತರಿಸಲು ಜೋಕುಮಾರಸ್ವಾಮಿಯ ಜನನವಾಗಿದ್ದು, ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ ನೆಪದಲ್ಲಿ ಜೋಕುಮಾರ ಕೊಲೆಗೀಡಾಗುತ್ತಾನೆ. ಮಳೆ, ಬೆಳೆಗಾಗಿಯೇ ಜನ್ಮಿಸಿದ ಜೋಕುಮಾರನನ್ನು ಮೆರಸುವುದು ತಲಾತಲಾಂತರದ ಜನಪದ ನಂಬಿಕೆ ಈ ಭಾಗದಲ್ಲಿ ವಿಶೇಷವಾಗಿದೆ. ಜೋಕುಮಾರನನ್ನು ಸೆ.29ರಂದು(ಜೋಕುಮಾರನ ಹುಣ್ಣಿಮೆ)ಕಳುಹಿಸಿಕೊಡಲಿದ್ದು, ರಾತ್ರಿ ಮಡಿವಾಳರ ಮನೆಗೆ ತೆರಳಿ ಬಿಳಿಬಟ್ಟೆ ಪಡೆದು ಜೋಕುಮಾರನಿಗೆ ಸುತ್ತಿ, ಸ್ಮಶಾನದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನವನ್ನು ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ.

ಆಧುನಿಕತೆಯ ಸೋಂಕಿನಿಂದ ಜೋಕುಮಾರ ಆಚರಣೆ ಮಂಕಾಗುತ್ತಿದ್ದು, ಜೋಕುಮಾರ ಆಚರಣೆ ಗ್ರಾಮೀಣ ಮಟ್ಟಕ್ಕೆ ಸೀಮಿತಗೊಳ್ಳುತ್ತ ಸಾಗಿದೆ.

ಜೋಕುಮಾರಸ್ವಾಮಿ ಆಚರಣೆಗೆ ತಗುಲುವ ವೆಚ್ಚ ಅಧಿಕವಾಗುತ್ತಿದೆ. ಸಂಗ್ರಹವಾಗುವ ದ್ರವ್ಯ ಕಡಿಮೆಯಾಗುತ್ತಿದ್ದು ಆಚರಣೆಗೆ ತೊಂದರೆಯಾಗುತ್ತಿದೆ. ಸರ್ಕಾರ, ಸ್ಥಳೀಯ ಆಡಳಿತ ಜೋಕುಮಾರ ಆಚರಣೆಗೆ ವಿಶೇಷ ಧನ ಸಹಾಯ ಮಾಡಬೇಕು.

ಮಂಜುಳಾ ಶಂಕ್ರಪ್ಪ

ಜೋಕುಮಾರ ಮೇಳದ ಮುಖ್ಯಸ್ಥೆ, ಕಂಪ್ಲಿ ಕೋಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net