

ಕಡಬ: ದಾಂಪತ್ಯ ಜೀವನ ಅತ್ಯಂತ ಅಮೂಲ್ಯವಾದುದು. ದಾಂಪತ್ಯ ಜೀವನ ಎಂಬುದು ಪ್ರೀತಿ, ವಿಶ್ವಾಸ, ನಂಬಿಕೆ, ಸಂತೃಪ್ತಿಯ ಆಗರ. ದಾಂಪತ್ಯ ಜೀವನ ಆದರ್ಶವಾಗಿ ಸಾಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ ಪುತ್ತೂರು, ದಶಮಾನೋತ್ಸವ ಸಮಿತಿ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಒಕ್ಕೂಟ, ಯುವ ಸಂಘ, ಮಹಿಳಾ ಸಂಘ ಗ್ರಾಮ ಸಮಿತಿ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ 16 ಮಾದರಿ ದಂಪತಿಗಳಿಗೆ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಂಪತ್ಯ ಎಂಬುದು ಬದುಕಿನ ಅಮೂಲ್ಯ ಘಟ್ಟ. ಪ್ರತಿ ಸನ್ನಿವೇಶದಲ್ಲೂ ಸತಿ-ಪತಿ ಹೊಂದಾಣಿಕೆಯಿಂದ ಸಾಗಿದರೆ ಸಂಸಾರ ಸುಂದರವಾಗಿರುತ್ತೆ ಎಂದರು.
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ ಉದ್ಘಾಟಿಸಿ ಶುಭಹಾರೈಸಿದರು. ಭಾರತ ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಎಂ.ಎನ್.ಗೌಡ ಕಾಣಿಯೂರು, ಪುತ್ತೂರು ವಿವಾಹ ವೇದಿಕೆ ಸಂಚಾಲಕ ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗೌಡ ಇಡ್ಯಡ್ಕ, ಅಧ್ಯಕ್ಷೆ ಸುಗಂಧಿ ಕೂರೇಲು, ದೋಳ್ಪಾಡಿ ಒಕ್ಕಲಿಗ ಸ್ವಸಹಾಯ ಒಕ್ಕೂಟ ಕಾರ್ಯದರ್ಶಿ ಕೇಶವ ಖಂಡಿಗ ಉಪಸ್ಥಿತರಿದ್ದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ. ಮನೋಹರ್ ಪ್ರಾಸ್ತಾವಿಸಿದರು. ಪ್ರೇರಕ ಗಣೇಶ್ ಕುದ್ಮಾರು ಸ್ವಾಗತಿಸಿದರು. ಮೇಲ್ವಿಚಾರಕ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚಾರ್ವಾಕ ಗ್ರಾಮದಲ್ಲಿ 50 ವರ್ಷ ಪೂರೈಸಿದ ಒಟ್ಟು 16 ದಂಪತಿಗಳನ್ನು ಸನ್ಮಾನಿಸಲಾಯಿತು.