ಯದುವೀರ್ ಬೆಂಬಲಿಸುವಂತೆ ಒಕ್ಕಲಿಗರ ಸಂಘಟನೆ ಒಕ್ಕೂಟ ಮನವಿ

yaduveer1
Published on

ಮೈಸೂರು: ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಕೊಡುಗೆ ಶೂನ್ಯ. ರಾಜ ಮನೆತನದವರ ಸಹಕಾರವೇ ಹೆಚ್ಚಿದ್ದು, ಒಕ್ಕಲಿಗ ಸಮಾಜ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಂಬಲಿಸಬೇಕು ಎಂದು ಒಕ್ಕಲಿಗರ ಸಂಘಟನೆ ಒಕ್ಕೂಟದ ಪ್ರತಿನಿಧಿ ಸತೀಶ್ ಗೌಡ ಬೀಡನಹಳ್ಳಿ ಮನವಿ ಮಾಡಿದರು.

ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮತ್ತು ಕೆಲವು ನಿರ್ದೇಶಕರು ಲೋಕಸಭಾ ಚುನಾವಣೆ ವೇಳೆ ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ಗೆ ಸಂಘ ಬೆಂಬಲ ನೀಡುತ್ತದೆ ಎಂದು ತಿಳಿಸಿರುವುದು ಅವರ ವೈಯಕ್ತಿಕ ನಿರ್ಧಾರ. ಇನ್ನೂ ಈಗಾಗಲೇ ಸಂಘದ ಚುನಾಯಿತ ಸಮಿತಿಯ ಅಧಿಕಾರಾವಧಿ ಮುಗಿದಿದ್ದು, ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಅಧ್ಯಕ್ಷ ಮತ್ತು ಕೆಲವು ನಿರ್ದೇಶಕರ ನಿಲುವುಗಳು ಸಮುದಾಯದ ನಿರ್ಧಾರ ಅಲ್ಲ. ಅವರು ಕಾಂಗ್ರೆಸ್ ಅಭ್ಯರ್ಥಿಗೆ ವೈಯಕ್ತಿಕವಾಗಿ ಬೆಂಬಲ ನೀಡಲಿ. ಆದರೆ ಇಡೀ ಸಂಘ ಬೆಂಬಲ ನೀಡುತ್ತಿದೆ ಎಂದು ಹೇಳುವುದು ತಪ್ಪು. ಸಮುದಾಯದ ಅಧಿಕೃತ ಸಂಘ ಒಂದು ಪಕ್ಷದ ಪರ ಪ್ರಚಾರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 47 ವರ್ಷಗಳಲ್ಲಿ ಮೈಸೂರಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡದಿದ್ದರೂ ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರ ಸೋಲಿಗೆ ಯಾರು ಕಾರಣ. ಈ ಬಗ್ಗೆ ಅವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಪ್ರಶ್ನಿಸಬೇಕು. ಕೆ.ಎಚ್.ರಾಮಯ್ಯನವರ ಸಹಾಯಕ್ಕೆ ನಿಂತಿದ್ದು ರಾಜಮನೆತನ. ಇನ್ನು ಒಕ್ಕಲಿಗ ಸಂಘ ಹಾಗೂ ಸಮುದಾಯಕ್ಕೂ ಮೈಸೂರು ಮಹಾರಾಜರು ಸಾಕಷ್ಟು ಸಹಕಾರ ನೀಡಿದ್ದಾರೆ. ಈ ಎಲ್ಲವನ್ನು ಸಮುದಾಯದ ಜನರು ಪರಿಶೀಲಿಸಿ ಮತ ಚಲಾಯಿಸಬೇಕು ಎಂದರು.

ಒಕ್ಕೂಟದ ಪ್ರಮುಖರಾದ ಕೃಷ್ಣ, ಹೇಮಾ, ಸುರೇಶ್ ಗೌಡ, ಗಣೇಶ್, ಸುರೇಂದ್ರ, ಅಣ್ಣೇಗೌಡ, ಕೃಷ್ಣೇಗೌಡ, ಬೆಟ್ಟೇಗೌಡ, ರಾಜಕುಮಾರ್, ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net