

ಬಳ್ಳಾರಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಗರದ ರಾಯಲ್ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್ಸಿ ಕೆ.ಸಿ.ಕೊಂಡಯ್ಯ ಮಾತನಾಡಿ, ನಿತ್ಯ ಬಳಕೆ ಮಾಡುವ ಇಂಧನ ಬೆಲೆಯನ್ನು ಏಕಾಏಕಿ ನೂರರ ಗಡಿಗೆ ದಾಟಿರುವುದು ಸೋಜಿಗದ ಸಂಗತಿಯಾಗಿದ್ದು, ದೇಶದ ಮತದಾರರು ಯೋಚಿಸಬೇಕು. ಇಷ್ಟೊಂದು ಪ್ರಮಾಣದಲ್ಲಿ ತೈಲ ಬೆಲೆ ಏರಿಕೆಯಾಗಿದ್ದು ಈವರೆಗೆ ನೋಡಿಲ್ಲ. ಕೋವಿಡ್ ಸಂದರ್ಭದಲ್ಲಿ ಏಕಕಾಲಕ್ಕೆ 100 ರೂ.ಗೆ ಬೆಲೆ ಏರಿಕೆ ಮಾಡಿರುವುದು ಜನರ ಆರ್ಥಿಕ ದಿವಾಳಿತನಕ್ಕೆ ನಾಂದಿ ಹಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ದೂರಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಮೋದಿ ಪ್ರಧಾನಿ ಆಗುವ ಮುನ್ನ ಆಡಿದ ಮಾತುಗಳೇ ಬೇರೆ ಈಗ ಅವರ ಜನ ವಿರೋಧಿ ನೀತಿಗಳ ಬಗ್ಗೆ ಪ್ರಶ್ನಿಸಿದರೆ ಮೌನಿಯಾಗುತ್ತಾರೆ. ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಟಿವಿ ಪರದೆ ಮುಂದೆ ಗಂಟೆ ಗಟ್ಟಲೆ ಮಾತನಾಡುತ್ತಾರೆ. ರಾಮರಾಜ್ಯವಾದ ಭಾರತದಲ್ಲಿ ತೈಲ ಬೆಲೆ 100ರೂ ಹೆಚ್ಚಿದ್ದರೆ, ಪಕ್ಕದ ರಾವಣ ರಾಜ್ಯ ಶ್ರೀಲಂಕಾದಲ್ಲಿ 59 ರೂ ಇದೆ. ಇದು ಮೋದಿ ದೇಶಕ್ಕೆ ನೀಡುವ ಆಡಳಿತದ ಪರಿಕಲ್ಪನೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ವಿ.ಮಾನಯ್ಯ, ಮುಂಡರಗಿ ನಾಗರಾಜ್, ರಾಮಪ್ರಸಾದ್, ಪಾಲಿಕೆ ಸದಸ್ಯರಾದ ವಿವೇಕ್, ಗಾದೆಪ್ಪ ಇತರರಿದ್ದರು.
ನೂರಾರು ಕಾರ್ಯಕರ್ತರು ಭಾಗಿ
ಜೂ.14ರವರೆಗೆ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತಯರು ಭಾಗವಹಿಸಿದ್ದರು. ದೈಹಿಕ ಅಂತರ ಮಾಯವಾಗಿತ್ತು. ಕರೊನಾ ನಿಯಂತ್ರಣಕ್ಕೆ ಬರುವ ಮುನ್ನವೇ ಜನಪ್ರತಿನಿಧಿಗಳ ನೇತೃತ್ವದಲ್ಲಿ ಗುಂಪು ಸೇರಿ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.