

ಹೊಸಪೇಟೆ: ತೈಲ ಬೆಲೆ ಏರಿಕೆ ಖಂಡಿಸಿ ಖಾಸಗಿ ಬಸ್ ಹಾಗೂ ಲಾರಿ ಚಾಲಕರು ಶುಕ್ರವಾರ ನಗರದ ಗಾಂಧೀಜಿ ವೃತ್ತದಲ್ಲಿ ಲಾರಿಗೆ ಹಗ್ಗಕಟ್ಟಿ ಎಳೆಯುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷ ವೆಂಕಟರಮಣ ಮಾತನಾಡಿ, ಪೆಟ್ರೋಲ್, ಡೀಸೆಲ್, ಆಟೋ ಎಲ್‌ಪಿಜಿ ಗ್ಯಾಸ್‌ಗಳ ಮೇಲಿನ ತೆರಿಗೆ ಇಳಿಸಬೇಕು. ಖಾಸಗಿ ಬಸ್, ವಾಹನಗಳ ಚಾಲಕರಿಂದ ಆರ್‌ಟಿಒ ಅಧಿಕಾರಿಗಳು ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ಕೈಬಿಡಬೇಕು. ಐಎಂವಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು. ಕರೊನಾ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟ ಚಾಲಕರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಗೃಹ ಮಂಡಳಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ವರಿಗೂ ಸೂರು ಹಾಗೂ ಸಾರಥಿಗೆ ಸೂರು ಎಂಬ ಯೋಜನೆ ಜಾರಿಗೆ ತರಬೇಕು. ರಾಜ್ಯ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಲಾಯಿತು. ಸೌತ್ ಜೋನ್ ಮೋಟಾರ್ ಟ್ರನ್ಸ್‌ಪೋರ್ಟ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ ಮತ್ತು ಏಜೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಭಾಗವಹಿಸಿದ್ದರು.