

ಶ್ರೀನಿವಾಸಪುರ : ಪಟ್ಟಣದ ಮುಖ್ಯಭಾಗದಲ್ಲಿರುವ ಪೊಲೀಸ್ ಠಾಣೆ ಹಿಂಭಾಗ ಎಗ್ಗಿಲ್ಲದೆ ಎಣ್ಣೆ ಪಾರ್ಟಿ ಮಾಡುತ್ತಿರುವ ಪುಂಡ ಪೋಕರಿಗಳು ಪಾರ್ಟಿ ನಂತರ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀನಿವಾಸಪುರ ಪೊಲೀಸ್ ಠಾಣೆ ಹಿಂಭಾಗವೇ ಬಾರ್ ಇದ್ದು, ಪಕ್ಕದ ಖಾಲಿ ಸ್ಥಳದಲ್ಲಿ ಬೆಳಗ್ಗೆ 6ಗಂಟೆಗೇ ಎಣ್ಣೆ ಸೇವಿಸಲು ಬರುವ ಪುಂಡರು ತೆರೆದ ಸ್ಥಳದಲ್ಲೆ ಕುಡಿಯುತ್ತಿದ್ದು, ಪಕ್ಕದಲ್ಲೇ ಇರುವ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಹೆಣ್ಣು ಮಕ್ಕಳಿಗೆ, ಶಾಲಾ&ಕಾಲೇಜಿನ ವಿದ್ಯಾರ್ಥಿನಿಯರಿಗೆ ಮತ್ತು ನಾಗಕರಿಗೆ ತೊಂದರೆ ನೀಡುತ್ತಿದ್ದಾರೆ. ಬೆಳಗಿನ ಹೊತ್ತು ಬಹುತೇಕ ಜನ ತಮ್ಮ ಕೆಲಸಗಳಿಗೆ ಹೋಗಲು ಬಸ್ಸುಗಳಿಗೆ ಕಾಯುತ್ತಿರುತ್ತಾರೆ. ಚಿಂತಾಮಣಿ ಖಾಸಗಿ ಬಸ್ ನಿಲ್ದಾಣವು ಸಹ ಇಲ್ಲೇ ಇದ್ದು, ನೂರಾರು ಜನ ಸೇರುವಲ್ಲಿ ಕುಡುಕರ ಅತಿರೇಕ ಮಿತಿ ಮೀರಿದೆ.
ವಿದ್ಯಾರ್ಥಿನಿಯರಿಗೆ ತೊಂದರೆ
ಬೆಳಗ್ಗೆ ಬೆಳಗ್ಗೆನೇ ಮದ್ಯ ಸೇವನೆ ಮಾಡುವ ಯುವಕರು ಪಕ್ಕದಲ್ಲೇ ಇರುವ ಬಸ್ ನಿಲ್ದಾಣ ಮತ್ತು ಶಾಲಾ&ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇಲ್ಲಿ ಅಷ್ಟೇ ಅಲ್ಲದೇ ತಾಲೂಕಿನ ಯಲ್ದೂರು, ಗೌನಿಪಲ್ಲಿ, ರಾಯಲ್ಪಾಡು, ಲಕ್ಷ್ಮೀಪುರ, ಸೋಮಯಾಜಲಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ ಊಹೆ ಮಾಡಲು ಸಾಧ್ಯವಿಲ್ಲದಂತಾಗಿದೆ.
ಬೆಳ್ಳಂಬೆಳಗ್ಗೆ ವಹಿವಾಟು ಜೋರು
ಪಕ್ಕದಲ್ಲೇ ಇರುವ ಬೇಕರಿ ಮತ್ತು ಟೀ ಅಂಗಡಿ ಸುತ್ತಮುತ್ತ ಅಕ್ರಮ ಮದ್ಯ ಮಾರಾಟವೂ ನಡೆಯುತ್ತಿದೆ. ಇನ್ನೂ ಕೆಲವರು ಆಟೋ ನಿಲ್ಲಿಸಿಕೊಂಡೇ ಮದ್ಯ ಸೇವಿಸುತ್ತಿದ್ದಾರೆ. ಇಷ್ಟೆಲ್ಲಾ ಮದ್ಯದ ಅವಾಂತರ ನಡೆಯುತ್ತಿದ್ದರೂ ಸಹ ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಇದೇ ರಸ್ತೆಯಲ್ಲೇ ಮನೆಗೆ ಹೋಗುವ ಪೊಲೀಸ್ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದು ಕಾಣುತ್ತಿದೆ. ಬೆಳ್ಳಂಬೆಳಗ್ಗೆ ಇವರಿಗೆ ಮದ್ಯ ಮಾರಾಟ ಮಾಡುತ್ತಿರುವವರು ಯಾರು?, ಯಾವ ಬಾರ್ ನಿಂದ ಖರೀದಿ ಮಾಡಿ ಹಾದಿ ಬೀದಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ? ಎಂಬುದನ್ನು ಪತ್ತೆ ಹಚ್ಚಿ ಮುಂದೆ ಆಗುವ ಅನಾಹುತಗಳಿಗೆ ಶ್ರೀನಿವಾಸಪುರ ಪೊಲೀಸರು ಇತಿಶ್ರೀ ಹಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ
ಬೆಳಗಿನ ಜಾವವೇ ಮದ್ಯ ಸೇವನೆಯಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿದೆ. ಪೊಲೀಸ್ ಠಾಣೆ ಹಿಂಭಾಗದ ಬಾರ್ಅನ್ನು ಪಟ್ಟಣದ ಹೊರ ವಲಯಕ್ಕೆ ಸ್ಥಳಾಂತರಿಸಿದರೆ, ಈ ಸಮಸ್ಯೆಗೆ ಮುಕ್ತಿ ನೀಡಬಹುದಾಗಿದೆ. ಅಧಿಕಾರಿಗಳು ಮತ್ತು ಸ್ಥಳಿಯ ಸಂಸ್ಥೆಗಳು ಕೂತು ಸೂಕ್ತ ನಿರ್ಧಾರ ಕೈಗೊಳ್ಳಲಿ. - ನರಸಿಂಹ ಮೂರ್ತಿ, ಪುರಸಭಾ ನಾಮಿನಿಸದಸ್ಯ