

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ ನೆರವೇರಿಸಲಾಯಿತು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಎಂದಿನಂತೆ ಮಾದಪ್ಪನಿಗೆ ಪೂಜೆ ನೆರವೇರಿಸಲಾಯಿತು. ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಲಿಂಗಮೂರ್ತಿಗೆ ಹುಚ್ಚೆಳ್ಳೆಣ್ಣೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಜತೆಗೆ ಹಾಲಿನ ಅಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಬಳಿಕ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ, ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಬಳಿಕ ಭಕ್ತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಎಣ್ಣೆಮಜ್ಜನ ಸೇವೆ ಹಿನ್ನೆಲೆಯಲ್ಲಿ ದೇಗುಲದ ಆವರಣದಲ್ಲಿ ಹೆಚ್ಚಿನ ಭಕ್ತರು ನೆರೆದಿದ್ದರು. ಸಂಜೆ 7ರಲ್ಲಿ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲದ ಸುತ್ತ ದಂಡಿನ ಕೋಲನ್ನು ಹೊತ್ತು ಪ್ರದಕ್ಷಿಣೆ ಹಾಕುವುದರ ಮೂಲಕ ಭಕ್ತಿಭಾವ ಮೆರೆದರು. ಉಘೇ ಮಾದಪ್ಪ, ಉಘೇ ಮಾಯ್ಕರ, ಜೈ ಮಹಾಂತ್ ಮಲೆಯಾ ಜಯ ಘೋಷವನ್ನು ಭಕ್ತರು ಮೊಳಗಿಸಿದರು.
ಉತ್ಸವಗಳಲ್ಲಿ ಭಾಗಿಯಾದ ಭಕ್ತರು: ಮ.ಬೆಟ್ಟಕ್ಕೆ ಆಗಮಿಸಿದ ಭಕ್ತರು ಅಂತರಂಗೆಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ ಕೈಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲ ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾಧಿಗಳಲ್ಲಿ ಭಾಗಿಯಾಗಿದ್ದರು.
ಪ್ರಾಧಿಕಾರದಿಂದ ಅಗತ್ಯ ಸೌಕರ್ಯ: ಕ್ಷೇತ್ರಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಅವರ ನೇತೃತ್ವದಲ್ಲಿ ಕುಡಿಯುವ ನೀರು, ಶೌಚಗೃಹ, ವಿಶೇಷ ನಿರಂತರ ದಾಸೋಹ, ನೆರಳಿನ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿತ್ತು. ಅಂಗವಿಕಲರು, ಹಿರಿಯ ನಾಗರಿಕರಿಗೆ ದೇವರ ದರ್ಶನ ಪಡೆಯಲು ವಿಶೇಷ ಕೌಂಟರ್ ಅವಕಾಶ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಶಕ್ತಿ ಯೋಜನೆಯ ಪರಿಣಾಮ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಬಸ್ ಸೌಕರ್ಯ ಕಲ್ಪಿಸಲಾಗಿದೆ.
ಬೀಡು ಬಿಟ್ಟಿರುವ ಭಕ್ತರು: ಮಹಾಲಯ ಅಮಾವಾಸ್ಯೆಗೆ ಆಸುಪಾಸಿನ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ಆಗಮಿಸಿ ಮೂರ‌್ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಅದರಂತೆಯೇ ಕಳೆದ ಮೂರ‌್ನಾಲ್ಕು ದಿನಗಳಿಂದ ಮೈಸೂರು, ಮದ್ದೂರು, ಚಾ.ನಗರ, ಮಳವಳ್ಳಿ, ನರಸೀಪುರ ಹಾಗೂ ಇನ್ನಿತರ ಕಡೆಗಳಿಂದ ಹೆಚ್ಚಿನ ಭಕ್ತರು ಈಗಾಗಲೇ ಪಾದಯಾತ್ರೆಯ ಮೂಲಕ ಆಗಮಿಸಿದ್ದು, ಶ್ರೀಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಜತೆಗೆ ಭಾನುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರ ತಮ್ಮ ಊರುಗಳಿಗೆ ಹಿಂದಿರುಗಲಿದ್ದಾರೆ.
ನಾಳೆಯಿಂದ ಶರನ್ನವರಾತ್ರಿ : ದಸರಾ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೆ.22 ರಿಂದ ಶರನ್ನವರಾತ್ರಿ ಉಯ್ಯಲೋತ್ಸವ ಆರಂಭವಾಗಲಿದೆ. ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ಹಸಿರು ಚಪ್ಪರವನ್ನು ಹಾಕಿ ತೂಗೂಯ್ಯಲೆಯ ತೊಟ್ಟಿಲು ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ 9 ದಿನಗಳ ಕಾಲ ಪ್ರತಿದಿನ ರಾತ್ರಿ 8.30ಕ್ಕೆ ಮಾದಪ್ಪನ ಪಟ್ಟದ ಉಯ್ಯಲೆಯ ಉತ್ಸವದ ಸೇವೆ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ನೆರವೇರಿಸಲಿದ್ದಾರೆ. ಈಗಾಗಲೇ ತೊಟ್ಟಿಲಿನ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಪ್ಪರ ನಿರ್ಮಾಣಕ್ಕೆ ಅಗತ್ಯ ಬಿದಿರನ್ನು ಸಂಗ್ರಹಿಸಲಾಗಿದೆ. ಅ.1 ರಂದು ಮಾದಪ್ಪನ ಸನ್ನಿಧಿಯಲ್ಲಿ ಮಹಾನವಮಿ, ಆಯುಧಪೂಜೆ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯಲಿದೆ. ಅ. 2 ರಂದು ವಿಜಯದಶಮಿ ವಿಶೇಷ ಪೂಜೆ, ಕುದುರೆ ವಾಹನನೋತ್ಸವ ಹಾಗೂ ರಾತ್ರಿ ಸ್ವಾಮಿಗೆ ಮಹಾ ನೈವೇದ್ಯದ ಬಳಿಕ ತೆಪ್ಪೋತ್ಸವ ಜರುಗಲಿದೆ.