ಮಳೆಯ ಕಣ್ಣಾಮುಚ್ಚಾಲೆ ಆಟ ಶೇಂಗಾ ಕುಂಠಿತ

dj clk shenga
Published on

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಒಂದು ಕಾಲದಲ್ಲಿ ಎಣ್ಣೆ ನಗರಿ ಎಂದೇ ಖ್ಯಾತಿಗಳಿಸಿದ್ದ ತಾಲೂಕಿನಲ್ಲಿ ಮಳೆಯ ಕಣ್ಣಾಮುಚ್ಚಾಲೆಯಿಂದ ಶೇಂಗಾ ಬೆಳೆ ಸಂಪೂರ್ಣ ಕುಂಠಿತವಾಗಿದೆ. ಸಂಪ್ರಾದಾಯಿಕ ಶೇಂಗಾ ಬೆಳೆಯನ್ನು ನಂಬಿದ್ದ ಈ ಭಾಗದ ರೈತರು, ಪರ‌್ಯಾಯ ಬೆಳೆಗಳತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ 1 ಲಕ್ಷ ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಸಂಪೂರ್ಣ ವಿಫಲವಾಗಿದೆ. ಮುಂಗಾರು ಬಿತ್ತನೆ ಕಾಲ ಮುಗಿಯುತ್ತಾ ಬಂದರೂ ಕೇವಲ 43,210 ಹೆ. ಭೂಮಿಯಲ್ಲಿ ಮಾತ್ರ ಶೇಂಗಾ ಬಿತ್ತನೆ ಮಾಡಿರುವುದು ಕಂಡು ಬಂದಿದೆ.

ಈಗಾಗಲೇ 10 ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿ ಮಳೆಯ ವ್ಯತ್ಯಯದಿಂದ ಶೇಂಗಾ ಬೆಳೆ ನಷ್ಟ ಮಾಡಿಕೊಂಡ ರೈತರು ಸ್ವಯಂ ಪ್ರೇರಿತವಾಗಿ ಮತ್ತೊಂದು ಬೆಳೆಯತ್ತ ವಾಲಿದ್ದಾರೆ. ಪ್ರಸಕ್ತ ವರ್ಷದ 6300 ಹೆ. ತೊಗರಿ ಬಿತ್ತನೆ ಗುರಿಯಲ್ಲಿ 10,350 ಹೆ. ಬಿತ್ತನೆ ಆಗಿದೆ. ಸಿರಿಧಾನ್ಯ ಬೆಳೆಗಳಾದ ಸಾವೆ, ರಾಗಿ, ನವಣೆ, ಆರಕ 700 ಹೆ. ಗುರಿಯಲ್ಲಿ 1845 ಹೆ. ಬಿತ್ತನೆಯಾಗಿದೆ.

2685 ಮೆಕ್ಕೆಜೋಳ ಗುರಿಯಲ್ಲಿ 5440 ಹೆ., 500 ಹೆ., ಸೂರ್ಯಕಾಂತಿಯಲ್ಲಿ ಈಗಾಗಲೇ 305 ಹೆ. ಬಿತ್ತನೆ ಮಾಡಲಾಗಿದೆ. ಹೊಸ ಬೆಳೆಯಾಗಿ ಹರಳು (ಔಡಲ) 150 ಹೆ., ಹತ್ತಿ 225 ಹೆ., ಹುರುಳಿ 30 ಹೆ., ಹೆಸರು 210 ಹೆ. ಭೂಮಿಯಲ್ಲಿ ಬಿತ್ತನೆ ಆಗಿರುವ ಪ್ರಮಾಣದಲ್ಲಿ ಈ ವರ್ಷ ಶೇಂಗಾ ಬೆಳೆಗಿಂತ ಪರ‌್ಯಾಯ ಬೆಳೆಗಳೇ ಹೆಚ್ಚು ದಾಖಲಾಗಿದೆ.

ಮುಂಗಾರು ಪೂರ್ವದಲ್ಲಿ ಉತ್ತಮವಾಗಿ ಆರಂಭವಾದ ಮಳೆ ಜುಲೈ ಅಂತ್ಯದವರೆಗೆ 181.3 ಎಂಎಂ ವಾಡಿಕೆ ಮಳೆಗಿಂತ 484.3 ಎಂಎಂ ಅಧಿಕ ಮಳೆಯಾಗಿತ್ತು.

ಈ ಸಮಯದಲ್ಲಿ ಇನ್ನು ರೈತರ ಭೂಮಿಗಳು ಹಸನು ಮಾಡಿಕೊಂಡಿಲ್ಲದ ಪರಿಸ್ಥಿತಿಯಲ್ಲಿ ಬಿತ್ತನೆ ಕಾರ್ಯ ನಡೆದಿರಲಿಲ್ಲ. ಆಗಸ್ಟ್ ತಿಂಗಳ ಆರಂಭದಲ್ಲಿ ಬಿತ್ತನೆಗೆ ಒಳ್ಳೆಯ ಕಾಲ ಎನ್ನುವ ರೈತರಿಗೆ ಮಳೆಯ ಕೊರತೆ ಎದುರಾಗಿ ಬಿತ್ತನೆಯಲ್ಲಿ ಕುಂಠಿತವಾಗಿದೆ. ಬೀಜ, ಗೊಬ್ಬರ ಜತೆಯಾಗಿಟ್ಟುಕೊಂಡು ಬಿತ್ತನೆಗೆ ಕಾಯುತ್ತಿರುವ ರೈತರಿಗೆ ಈ ವರ್ಷವೂ ಬರಗಾಲದ ಪರಿಸ್ಥಿತಿಯ ಆತಂಕವಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರೂ ಶೇಂಗಾ ಬಿತ್ತನೆಗೆ ಅನುಕೂಲವಾಗಿಲ್ಲ. ಈಗಾಗಲೇ ಶೇಂಗಾ ಬಿತ್ತನೆಯ ಹದ ಕೈತಪ್ಪಿರುವುದರಿಂದ ರೈತರು ಪರ‌್ಯಾಯ ಬೆಳೆಗಳ ಕೃಷಿ ಮಾಡಬೇಕು.

ಕಡಿಮೆ ನೀರು, ಖರ್ಚು ಮತ್ತು ಅಲ್ಪ ಅವಧಿಯಲ್ಲಿ ಲಾಭ ತರುವ ಸಿರಿಧಾನ್ಯ ಬೆಳೆಗಳನ್ನು ಬೆಳೆದುಕೊಳ್ಳಲು ರೈತರು ಮುಂದಾಗಿದ್ದಾರೆ. ತಾಲೂಕಿನ ಬಹು ಭಾಗದಲ್ಲಿ ಈ ವರ್ಷ ನಿರೀಕ್ಷೆ ಮೀರಿ ಸಿರಿಧಾನ್ಯ ಬೆಳೆಯಲಾಗಿದೆ. ಬಿತ್ತನೆ ಗುರಿಯಲ್ಲಿ ಶೇ.50ಕ್ಕೂ ಕಡಿಮೆ ಪ್ರಮಾಣದಲ್ಲಿ ಶೇಂಗಾ ಬಿತ್ತನೆಯಾಗಿದೆಡಾ.ಜೆ.ಅಶೋಕ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಚಳ್ಳಕೆರೆ. ಶೇಂಗಾ ಬಿತ್ತನೆ ಆಸೆಯನ್ನು ರೈತರು ಕಳೆದುಕೊಂಡಿದ್ದಾರೆ. ಹೊಲ ಹಸನು ಮಾಡಿಕೊಂಡು ಬೀಜ, ಗೊಬ್ಬರ ವ್ಯವಸ್ಥೆ ಮಾಡಿಕೊಂಡಿದ್ದ ರೈತರಿಗೆ ನಷ್ಟವಾಗಿದೆ. ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಬೆಳೆ ವಿಮೆ ಕಟ್ಟಿರುವ ಪ್ರತಿಯೊಬ್ಬರಿಗೂ ಹಣ ಬಿಡುಗಡೆ ಮಾಡುವಂತೆ ಕ್ರಮ ವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೆ ಮುಂದಾಗಬೇಕುರೆಡ್ಡಿಹಳ್ಳಿ ವೀರಣ್ಣ, ಉಪಾಧ್ಯಕ್ಷ, ರಾಜ್ಯ ರೈತ ಸಂಘ, ಚಳ್ಳಕೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net