

ಹುಬ್ಬಳ್ಳಿ: ಇಲ್ಲಿನ ವಾರ್ಡ್ ನಂ. 35 ರ ಗೋಕುಲ ರಸ್ತೆಯ ಸನ್ಮಾರ್ಗ ನಗರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಯುಜಿಡಿ ಕಾಮಗಾರಿಗಾಗಿ ಮನೆಗಳ ಮುಂದಿನ ರಸ್ತೆಯನ್ನು ಅಗೆಯಲಾಗಿದ್ದು, ಇದುವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಬೇಸಿಗೆಯಲ್ಲಿ ಕೆಂಧೂಳುಮಯ, ಮಳೆಗಾಲದಲ್ಲಿ ಕೊಚ್ಚೆಗುಂಡಿಗಳ ಕೆಸರು ರಾಡಿ ತುಂಬಿಕೊಂಡು ವೃದ್ದರು, ಮಕ್ಕಳು ಮನೆಯಿಂದಾಚೆ ಕಾಲಿಡುವಂತಿಲ್ಲ. ಈ ವಾರ್ಡಿನ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಅಲವತ್ತುಕೊಂಡರೂ ಯಾರೂ ಸ್ಪಂದಿಸಿಲ್ಲ.
ಈ ರಸ್ತೆಯ ದುರವಸ್ಥೆಯ ಬಗ್ಗೆ ಕೇಳಿದರೆ ಸುಳ್ಳು ಸಬೂಬುಗಳನ್ನು ಹೇಳಿ ಜಾರಿಕೊಳ್ಳುತ್ತಾರೆ. ಅನುದಾನದ ಕೊರತೆಯ ಕಾರಣ ಹೇಳುವ ಪಕ್ಷದ ಕಾರ್ಯಕರ್ತರೆಂದು ಗುರುತಿಸಿಕೊಂಡಿರುವವರೊಬ್ಬರು ತಮ್ಮ ಮನೆಯ ಮುಂದಿನ ರಸ್ತೆಯನ್ನು ಇತಿ್ತೕಚೆಗೆ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿಸಿಕೊಂಡಿದ್ದಾರೆ! ಇಂಥಹ ತಾರತಮ್ಯವೇಕೆ?
ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡುವುದಾಗಿ ಕೆಲ ದಿನಗಳ ಹಿಂದೆ ಭೂಮಿಪೂಜೆಯನ್ನು ಸಹ ನೆರವೇರಿಸಿಕೊಂಡು ಹೋಗಿದ್ದಾರೆ. ಇದೆಲ್ಲ ತೋರಿಕೆಗೆ ಮಾತ್ರ ಎನಿಸುವದಿಲ್ಲವೆ ? ಬಹುದಿನಗಳ ನಮ್ಮ ಈ ಸಂಕಷ್ಟಕ್ಕೆ ಇನ್ನಾದರೂ ಸ್ಪಂದಿಸುತ್ತೀರೆಂದು ನಂಬೋಣವೇ?
-ವೀರಭದ್ರ ರಟ್ಟಿಹಳ್ಳಿ ಹಾಗೂ ಸ್ಥಳೀಯ ನಿವಾಸಿಗಳು ಹುಬ್ಬಳ್ಳಿ