ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ

Published on

ಬಳ್ಳಾರಿ ; ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಪಂ ಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಐದನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ವಿವಿಧ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಆಯೋಗದಿಂದ ಶಿಫಾರಸು ಮಾಡಲಾಗುವುದು. ಕಟ್ಟಡ ತೆರಿಗೆ, ವಾಣಿಜ್ಯ ಮಳಿಗೆಗಳ ತೆರಿಗೆ ಬಾಕಿ ವಸೂಲಾತಿಗಳನ್ನು ಕ್ರಮ ವಹಿಸಬೇಕು ಎಂದರು.

ನಗರ ಸ್ಥಳೀಯ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ಥಿತಿಗಳನ್ನು ಪರಿಶೀಲಿಸಿ ನಂತರ ಸಂಪನ್ಮೂಲಗಳ ಹಂಚಿಕೆ ಹಾಗೂ ವಿಭಜನೆಯ ಶಿಫಾರಸ್ಸುಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ಬಾಡಿಗೆ ಆದಾಯ, ಬಳಕೆದಾರರ ಶುಲ್ಕ, ಇನ್ನಿತರ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ನಗರ ಸ್ಥಳೀಯ , ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಖಾತಾ ಪ್ರತಿ ದಾಖಲೆಗಳನ್ನು ತ್ವರಿತವಾಗಿ ನೀಡುವಿಕೆ, ನೀರು ಸರಬರಾಜು, ಒಳಚರಂಡಿ, ಬೀದಿ ದೀಪಗಳು, ಘನತ್ಯಾಜ್ಯ ನಿರ್ವಹಣೆ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿವರಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಕರ್ಯ ಒದಗಿಸಲು ಹೆಚ್ಚು ಅನುದಾನ, ವಿವಿಧ ಮಂಜೂರು ಅಗತ್ಯತೆ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಆಯೋಗದ ಅಧ್ಯಕ್ಷರಿಗೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net