ನರೇಗಾ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸಿದ ಅಧಿಕಾರಿಗಳು

03 HANUR 2 A
Published on


ಚಾಮರಾಜನಗರ: ತಾಲೂಕಿನ ಗಡಿಯಂಚಿನ ಅರ್ಧನಾರಿಪುರ ಸೋಲಿಗರ ಗ್ರಾಮಕ್ಕೆ ಬುಧವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿ, ಸುಮಾರು 80 ಜನರ ಹೆಸರನ್ನು ನರೇಗಾ ಉದ್ಯೋಗಕ್ಕೆ ನೋಂದಾಯಿಸಿಕೊಳ್ಳಲಾಯಿತು.


ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗಡಿಯಂಚಿನ ಈ ಗಿರಿಜನ ಗ್ರಾಮದಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಸುಮಾರು 500 ಜನರು ವಾಸವಿದ್ದಾರೆ. ಇಲ್ಲಿನ ಬಹುತೇಕ ಜನರು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಇದೀಗ ಬೇಸಿಗೆ ಇರುವುದರಿಂದ ಜಮೀನುಗಳಲ್ಲಿ ಸಮರ್ಪಕವಾಗಿ ಕೂಲಿ ಕೆಲಸ ದೊರೆಯುತ್ತಿಲ್ಲ. ಇತ್ತ ನರೇಗಾ ಕೂಲಿಯನ್ನು ಗ್ರಾಪಂ ಬಿಡುಗಡೆ ಮಾಡಿಲ್ಲ.

ಇನ್ನು ನರೇಗಾ ಯೋಜನೆಯಡಿ ಸರಿಯಾದ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಇತ್ತ ಗ್ರಾಮದಲ್ಲಿ ನೀರಿನ ಸಮಸ್ಯೆಯು ಉಲ್ಬಣಿಸಿದೆ. ಇದರಿಂದ ಗ್ರಾಮದ ಬಹುತೇಕ ಜನರು ಜೀವನ ನಿರ್ವಹಣೆಗಾಗಿ ಕೊಡಗು, ಮಡಿಕೇರಿ ಹಾಗೂ ಹಾಸನದ ಕಡೆಗೆ ಮೆಣಸು ಹಾಗೂ ಕಾಫಿ ಬಿಡಿಸುವ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿ, ಹಲವಾರು ಮನೆಗಳಿಗೆ ಬೀಗ ಜಡಿಯಲಾಗಿದೆ.


ಇದನ್ನು ಗಮನಿಸಿದ ವಿಜಯವಾಣಿ ಪತ್ರಿಕೆ ಏ.1ರಂದು ‘ಕೂಲಿ ಅರಸಿ ಗುಳೆ ಹೋದ ಮತದಾರರು’ ಶೀರ್ಷಿಕೆಯಡಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದರಿಂದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಚ್ಚೆತ್ತ ಪಿಡಿಒ ಗೋವಿಂದಪ್ಪ ಹಾಗೂ ಐಇಸಿ ಸಂಯೋಜಕ ಮಹೇಶ್ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಮನೆಮನೆಗೂ ತೆರಳಿ ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ಪರಿಣಾಮ ಸುಮಾರು 80 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜತೆಗೆ ತೊಂಬೆಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.

ಈ ಸಂಬಂಧ ವಿಜಯವಾಣಿಯೊಂದಿಗೆ ಪಿಡಿಒ ಗೋವಿಂದಪ್ಪ ಮಾತನಾಡಿ, ಗ್ರಾಮಕ್ಕೆ ಭೇಟಿ ನೀಡಿ ನರೇಗಾ ಯೋಜನೆಯಡಿ ಉದ್ಯೋಗ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸಲಾಗಿದೆ. ಯಾವುದೇ ಕಾರಣಕ್ಕೂ ಗುಳೆ ಹೋಗದಂತೆ ತಿಳಿವಳಿಕೆ ನೀಡಲಾಗಿದೆ. ಇನ್ನು ಕೊಡುಗು, ಮಡಿಕೇರಿ ಹಾಗೂ ಹಾಸನದ ಕಡೆಗೆ ಗುಳೆ ಹೋಗಿರುವ ಜನರು ಯುಗಾದಿ ಹಬ್ಬಕ್ಕೆ ಗ್ರಾಮಕ್ಕೆ ಆಗಮಿಸಲಿದ್ದು, ಈ ವೇಳೆ ಗುಳೆ ಹೋಗದಂತೆ ತಿಳಿವಳಿಕೆ ನೀಡುವುದರ ಜತೆಗೆ ಅವರಿಗೆ ಲೋಕಸಭೆ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net