

ಆರ್.ಕೃಷ್ಣ ಮೈಸೂರು
ಸರ್ಕಾರಿ ಜಾಗವನ್ನೇ ಪರಭಾರೆ ಮಾಡಲು ಮುಂದಾಗಿದ್ದರೂ ಜಿಲ್ಲಾಡಳಿತ ಕಣ್ಣುಚ್ಚಿ ಕುಳಿತಿದೆ. ಸ್ಮಶಾನ ಜಾಗವೇ ಒತ್ತುವರಿಯಾಗಿದ್ದರೂ ತಾಲೂಕು ಅಧಿಕಾರಿಗಳು ಇದುವರೆವಿಗೂ ಯಾವುದೇ ಕ್ರಮಕೈಗೊಂಡಿಲ್ಲ.
ನಂಜನಗೂಡು ತಾಲೂಕು ಹೆಗ್ಗಡಹಳ್ಳಿ (ಕೊಂಗಳ್ಳಿ)ಯ ಸರ್ವೇ ಸಂಖ್ಯೆ 6/1, 6/2 ಹಾಗೂ ಸರ್ವೇ ಸಂಖ್ಯೆ 7ರ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ ಯಾವುದೇ ದಾಖಲೆ ಇಲ್ಲದಿದ್ದರೂ ಸ್ಮಶಾನಕ್ಕೆ ಮೀಸಲಿಟ್ಟ ಜಾಗವೂ ಸೇರಿದಂತೆ ಸರ್ಕಾರಿ ಖರಾಬು ಜಾಗವನ್ನು ಬೇರೊಬ್ಬರಿಗೆ ಮಾರಾಟ ಮಾಡುವ ಪ್ರಯತ್ನವೂ ನಡೆದಿದೆ.
ಈ ಬಗ್ಗೆ ಎಚ್ಚೆತ್ತು ಎಚ್.ಕೊಂಗಳ್ಳಿಯ ವಕೀಲರಾದ ರವಿಕುಮಾರ್, ಗ್ರಾಮಸ್ಥರ ಮೂಲಕ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದಾಗ, ಜಮೀನಿಗೆ ಹಾಕಿಕೊಂಡಿದ್ದ ತಂತಿ ಬೇಲಿ ತೆರವುಗೊಳಿಸಲು ಸಿಬ್ಬಂದಿ ಮುಂದಾದರು. ಈ ವೇಳೆ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮೇಲೆ ಜಮೀನು ಅಕ್ರಮ ಮಾರಾಟಕ್ಕೆ ಮುಂದಾಗಿದ್ದ ವ್ಯಕ್ತಿಗಳು ದೌರ್ಜನ್ಯವೆಸಗಿದ್ದಾರೆ. ಇಷ್ಟಾಗಿಯೂ ಅಧಿಕಾರಿಗಳು ತಂತಿ ಬೇಲಿ ತೆರವುಗೊಳಿಸಿದ್ದಾರೆಯೇ ವಿನಾ ಜಮೀನು ವಶಕ್ಕೆ ಪಡೆದುಕೊಳ್ಳಲು ಒಂದು ವರ್ಷ ಕಳೆದರೂ ಇನ್ನೂ ಸಾಧ್ಯವಾಗಿಲ್ಲ.
ಅಲ್ಲದೇ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಳವಡಿಸಿದ್ದ, ಸ್ಮಶಾನ ಜಾಗ, ಇದನ್ನು ಒತ್ತುವರಿ ಮಾಡಿಕೊಂಡರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆಗಾಗಿ ಹಾಕಿದ್ದ ನಾಮಫಲಕವನ್ನು ಕಿತ್ತು ಹಾಕಲಾಗಿದೆ. ಮತ್ತೆ ನಾಮಫಲಕ ಅಳವಡಿಸಿ ಸ್ಮಶಾನದ ಜಾಗವನ್ನು ರಕ್ಷಿಸುವ ಕೆಲಸ ಅಗಿಲ್ಲ. ದೂರು ಬಂದಾಗ ನಾಮ್ ಕೆ ವಾಸ್ತೆ ಎನ್ನುವಂತೆ ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಸ್ಥಳ ಭೇಟಿ ಶಾಸ್ತ್ರ ಮುಗಿಸಿ ಮೇಲಾಧಿಕಾರಿಗೆ ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಮೇಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ದೌರ್ಜನ್ಯದ ವಿರುದ್ಧ ಮೊಕದ್ದಮೆಯೂ ಇಲ್ಲ:
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವಾಗ ದೌರ್ಜನ್ಯವೆಸಗಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಮೇಲಾಧಿಕಾರಿಗೆ ವರದಿ ಸಲ್ಲಿಸಿ ಹತ್ತು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ನಂಜನಗೂಡು ತಾಲೂಕು ಎಚ್.ಕೊಂಗಳ್ಳಿಯ ಸರ್ವೆ ಸಂಖ್ಯೆ 6/1ರಲ್ಲಿ ಗ್ರಾಮಸ್ಥರಿಗೆ ಮಂಜೂರಾಗಿರುವ 1.07 ಎಕರೆ ಸ್ಮಶಾನ ಜಾಗ, 6/2ರಲ್ಲಿ 1.06 ಎಕರೆ ಸರ್ಕಾರಿ ಖರಾಬು ಹಾಗೂ ಸರ್ವೇ ಸಂಖ್ಯೆ 7ರಲ್ಲಿ 2.14 ಎಕರೆ ಸರ್ಕಾರಿ ಜಾಗ ಇದೆ. ಇದಕ್ಕೆ ಬೇಲಿ ಹಾಕಿಕೊಂಡಿರುವುದು ಕಂಡುಬಂದಿದ್ದು, ಇದನ್ನು ತೆರವುಗೊಳಿಸಲು ಮುಂದಾದಾಗ ಹೆಗ್ಗಡಹಳ್ಳಿಯ ಚಿಕ್ಕಣ್ಣ ಮತ್ತು ಮಹದೇವ ಅವರು ದೌರ್ಜನ್ಯ ಎಸಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ವರದಿ ಮಾಡಿ ಕಡತವನ್ನು ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ 2023ರ ಜುಲೈ 7 ರಂದು ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಇದುವರೆವಿಗೂ ಯಾವುದೇ ಕ್ರಮಕೈಗೊಳ್ಳದೆ ಜಾಗ ದೌರ್ಜನ್ಯವೆಸಗಿದವರ ಸುಪರ್ದಿಯಲ್ಲಿಯೇ ಇದೆ.
ಸರ್ಕಾರಿ ಜಾಗದಲ್ಲಿ ಮರಗಳ ಹನನ:
ಅನಧಿಕೃತವಾಗಿ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡಿರುವುದಲ್ಲದೇ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ಹನನ ಮಾಡಲಾಗಿದೆ. ಮರ ಕಡಿಯುವಾಗಲೇ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಮರಗಳನ್ನು ರಕ್ಷಿಸುವ ಕೆಲಸ ಅಗಿಲ್ಲ ಎನ್ನುವ ಆರೋಪವಿದೆ. ಸರ್ಕಾರಿ ಜಾಗವನ್ನು ರಕ್ಷಿಸಬೇಕಾದ ಕಂದಾಯ ಅಧಿಕಾರಿಗಳ ಕಣ್ಣ ಮುಂದೆಯೇ ಜಾಗ ಒತ್ತುವರಿಯಾಗಿ, ಸ್ಮಶಾನದ ಜಾಗವನ್ನೂ ಕಬಳಿಸಿದ್ದರೂ ಇನ್ನು ಸುಮ್ಮನೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಾಗ ವಶಪಡಿಸಿಕೊಳ್ಳುವ ವಿಚಾರವಾಗಿ ಪ್ರಸ್ತಾಪಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವ ಸಬೂನು ಅಧಿಕಾರಿಗಳಿಂದ ಬರುತ್ತಿದೆ.
ಅಧಿಕಾರಿಗಳೇಕೆ ಸುಮ್ಮನಿದ್ದಾರೆ?
ಸರ್ಕಾರಿ ಜಾಗವನ್ನು ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು, ಸರ್ಕಾರಿ ಜಾಗ, ಸ್ಮಶಾನ ಒತ್ತುವರಿ ಅಗುತ್ತಿದ್ದರೂ ಸುಮ್ಮನೇಕೆ ಇದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಗ್ರಾಮಸ್ಥರಿಗೆ ಮೀಸಲಿಟ್ಟ ಸ್ಮಶಾನ ಅಲ್ಲದೇ ಸರ್ಕಾರಿ ಖರಾಬು ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಮಾರಾಟಕ್ಕೆ ಯತ್ನಿಸಲಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗಿದವರ ವಿರುದ್ಧವೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರೆ ಅನುಮಾನ ಕಾಡುತ್ತಿದೆ.
ಎಚ್. ಕೊಂಗಳ್ಳಿ ರವಿಕುಮಾರ್, ವಕೀಲರು
ಕ್ರಮಕ್ಕೆ ಸೂಚಿಸಲಾಗಿದೆ
ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬರುವುದಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಈಗಾಗಲೇ ತಹಸೀಲ್ದಾರ್‌ಗೆ ಸೂಚಿಸಲಾಗಿದೆ.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ಮೈಸೂರು
ಸ್ಥಳ ಮಹಜರು ಮಾಡಲಾಗುವುದು
ಈ ಹಿಂದೆ ತಂತಿಬೇಲಿ ತೆರವುಗೊಳಿಸಿ ಫಲಕ ಅಳವಡಿಸಲಾಗಿತ್ತು. ಆದರೆ ಬಳಿಕ ಚುನಾವಣೆ ಇದ್ದುದ್ದರಿಂದ ಅತ್ತ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಶೀಘ್ರವೇ ಸ್ಥಳ ಪರಿಶೀಲಿಸಿ ಮಹಜರು ಮಾಡಲಾಗುವುದು.
ಶಿವಕುಮಾರ್ ಕಾಸನೂರು, ತಹಸೀಲ್ದಾರ್ ನಂಜನಗೂಡು