

ಮಡಿಕೇರಿ: ವಿವಾಹವಾದ ಮೂರೇ ದಿನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಹೆಬ್ಬಾಲೆ ಗ್ರಾಮದ ೬ನೇ ಹೊಸಕೋಟೆಯ ದಲಿತ ಯುವತಿಯ ಕುಟುಂಬಕ್ಕೆ ಅಧಿಕಾರಿಗಳು ಸರ್ಕಾರದ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಆರ್.ಮಂಜುನಾಥ್ ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ವರ್ಗ ದೌರ್ಜನ್ಯ ಕಾಯ್ದೆಯಡಿ ಮೃತ ಯುವತಿಯ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕಾಗಿದ್ದ ಪರಿಹಾರ ಇಲ್ಲಿಯವರೆಗೆ ನೀಡಿಲ್ಲವೆಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈಗಾಗಲೇ ಹಲವು ಬಾರಿ ಸಾಮಾಜ ಕಲ್ಯಾಣ ಇಲಾಖೆಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಪರಿಹಾರ ನೀಡದೆ ಮೀನಾಮೇಷ ಎಣಿಸುತ್ತಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಅಮಾಯಕ ಯುವತಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಇ.ಸಣ್ಣಪ್ಪ, ಸಂತ್ರಸ್ತರಾದ ಭವಾನಿ, ಜಾನಕಿ, ರಕ್ಷಿತ ಹಾಗೂ ರಾಜು ಉಪಸ್ಥಿತರಿದ್ದರು.