ಅಧಿಕಾರಿಗಳ ಮುಷ್ಕರ, ಸೇವೆಗಳೇ ದುಸ್ತರ!

muskara
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ ಐದು ದಿನಗಳಿಂದ ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದ ಬಿಸಿ ಇದೀಗ ಸಾರ್ವಜನಿಕರಿಗೆ ತಟ್ಟಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಸರ್ಕಾರಿ ಸೇವೆಗಳಲ್ಲಿ ಭಾರಿ ವ್ಯತ್ಯಯವಾಗಿದೆ. ಈ ಕಾರಣದಿಂದ ಸಾರ್ವಜನಿಕರು ಬೃಹತ್ ಸಾಲುಗಳಲ್ಲಿ ಸರ್ಕಾರಿ ಕಚೇರಿ ಮುಂಭಾಗ ಠಿಕಾಣಿ ಹೂಡಿದ್ದಾರೆ. ಕಾರ್ಕಳ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳಿದ್ದು, 32 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮಗಳು ಸಹಿತ 25 ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 16 ಕಂದಾಯ ಗ್ರಾಮಗಳಿದ್ದು, 9 ಗ್ರಾಮ ವೃತ್ತಗಳಿವೆ. ಹೆಬ್ರಿ ತಾಲೂಕು ಕಚೇರಿ ಹಾಗೂ ಗ್ರಾಮ ಮಟ್ಟದಲ್ಲಿ 7ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒತ್ತಡದಲ್ಲಿ ಅಧಿಕಾರಿಗಳು

ಕಾರ್ಕಳ ತಾಲೂಕಿನ 19 ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 6 ಮಂದಿ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. 13 ಆಡಳಿತ ಅಧಿಕಾರಿ ಹುದ್ದೆಗಳು ಖಾಲಿಯಿದ್ದು, ತಲಾ ಅಧಿಕಾರಿಯೊಬ್ಬ ಪ್ರತಿ ಎರಡು ವೃತ್ತಗಳ ಕಾರ್ಯವನ್ನು ನಿಭಾಯಿಸಬೇಕಿದೆ. ವಾರದಲ್ಲಿ ಐದು ದಿನ ಎರಡು ವೃತ್ತಗಳಲ್ಲಿ ಹಾಗೂ ಒಂದು ದಿನ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಒತ್ತಡದಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ಜತೆಗೆ ಆಧಾರ್ ಸೀಡಿಂಗ್, ಬೆಳೆ ಸಮೀಕ್ಷೆಗಾಗಿ ಅಧಿಕಾರಿಗಳು ಸಂಬಂಧಿತರ ಮನೆಗೆ ತೆರಳಿ ಪರಿಶೀಲಿಸುವ ಕಾರ್ಯ ಮಾಡಬೇಕಿದೆ. ಹೆಬ್ರಿ ತಾಲೂಕು ಕಚೇರಿಯಲ್ಲಿ ಐದು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾಲ್ಕು ಮಂದಿ ತಲಾ ಎರಡೆರಡು ಹುದ್ದೆ ನಿಭಾಯಿಸುತ್ತಿದ್ದಾರೆ. ಇನ್ನೂ ನಾಲ್ಕು ಹುದ್ದೆಗಳು ಖಾಲಿ ಇವೆ.

ಯಾವುದೆಲ್ಲ ಸೇವೆಗಳಲ್ಲಿ ವ್ಯತ್ಯಯ?

ಪೆನ್ಷನ್ ಅರ್ಜಿಗಳು, ಭೂ ಪರಿವರ್ತನೆ, 94ಸಿ ಅರ್ಜಿಗಳು, ಬಗರ್‌ಹುಕುಂ, ಖಾತಾ ಬದಲಾವಣೆ, ಆರ್‌ಟಿಸಿ ಸಹಿತ ಸಕಾಲ ಸೇವೆಗಳು ಸಾರ್ವಜನಿಕರಿಗೆ ವಂಚಿತವಾಗಿದೆ. ಇನ್ನೊಂದೆಡೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯಕ್ಕೂ ಸಂಚಕಾರ ಎದುರಾಗಿದ್ದು, ಸಿಇಟಿ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಗ್ರಾಮಾ ಆಡಳಿತ ಅಧಿಕಾರಿ ಕಚೇರಿ ಮುಂಭಾಗದಲ್ಲಿ ಟೊಂಕ ಕಟ್ಟಿ ನಿಲ್ಲಬೇಕಿದೆ. ಜಾತಿ ಪ್ರಮಾಣ ಪತ್ರ ಸಲ್ಲಿಸಲು ಫೆ.18ರಂದೇ ಅಂತಿಮ ದಿನವಾಗಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಕರ್ತವ್ಯದ ಒತ್ತಡಗಳಿಂದ ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ತೊಂದರೆಯುಂಟಾಗುತ್ತಿದೆ. ಸರ್ಕಾರ ಆದಷ್ಟು ಬೇಗ ನಮ್ಮ ಪ್ರತಿಭಟನೆ ಸ್ಪಂದಿಸಿ ಬೇಡಿಕೆ ಈಡೇರಿಸಬೇಕು. ವಾರದಲ್ಲಿ ಎರಡು ಗ್ರಾಮ ವೃತ್ತಗಳು, ತಾಲೂಕು ಕಚೇರಿಯಲ್ಲಿ ಕರ್ತವ್ಯ ಸಲ್ಲಿಸುವ ಒತ್ತಡಗಳಿವೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಆದರ್ಶ ಶೆಟ್ಟಿ, ಕಾರ್ಕಳ ಗ್ರಾಮ ಆಡಳಿತ ಆಧಿಕಾರಿಗಳ ಸಂಘ ಪ್ರಧಾನ ಕಾರ್ಯದರ್ಶಿ ಈಗಾಗಲೇ ಜಾತಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಇನ್ನೂ ಕೈ ಸೇರಿಲ್ಲ. ಅಧಿಕಾರಿಗಳ ಮುಷ್ಕರದಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ಸರ್ಕಾರ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ನಮ್ಮ ಶೈಕ್ಷಣಿಕ ಜೀವನವೇ ನಾಶವಾಗುವ ಭೀತಿ ಇದೆ. -ಪೂಜಾ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ https://www.vijayavani.net/election-of-shirva-cooperative-president-vice-president https://www.vijayavani.net/the-work-of-ananthapadmanabha-friends-is-commendable

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net