

ತುಬಚಿ: ಬಹು ವರ್ಷಗಳ ಬಳಿಕ ಹೊಳೆ ಸಾಲಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜಮಖಂಡಿ ತಾಲೂಕಿನ ಜಂಬಗಿ ಕೆ. ಡಿ. ಹಾಗೂ ತುಂಗಳ ರಸ್ತೆ ಮಾರ್ಗ ಮಧ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ನಾಪತ್ತೆಯಾಗಿರುವ ಚಿರತೆ ಈಗ ಎಲ್ಲರ ನಿದ್ದೆಗೇಡಿಸಿದೆ. ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.!!
ಇದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹೆಜ್ಜೆ ಗುರುತೆಂದು ಖಚಿತ ಪಡಿಸಿಕೊಂಡು ತಂತ್ರ ರೂಪಿಸಿದ್ದಾರೆ. ಇದನ್ನು ಸವಾಲಾಗಿ ತೆಗೆದುಕೊಂಡು ಚಿರತೆ ಓಡಾಡಿದ ಹೆಜ್ಜೆ ಗುರುತು ದಳದಲ್ಲಿ ಗುರುವಾರ ರಾತ್ರಿ ಮೂರು ಕ್ಯಾಮರಾ ಅಳವಡಿಸಿ, ಶುಕ್ರವಾರ ಬೆಳಗ್ಗೆ ಮೇಲಾಧಿಕಾರಿಗಳ ಜೊತೆ ಮತ್ತಷ್ಟು ವಿಷಯಗಳನ್ನು ಚರ್ಚಿಸಿ ಹೆಚ್ಚಿನ ಕಾರ್ಯಾಚರಣೆ ನಡೆಸಿದರು.
ಚಿರತೆ ರೈತರೊಬ್ಬರ ತೋಟದಲ್ಲಿನ ನಾಯಿ ಮೇಲೆ ದಾಳಿ ನಡೆಸಿ ತಿಂದು ಹಾಕಿದ್ದು, ಗ್ರಾಮಸ್ಥರು ಕೆಲಸ ಕಾರ್ಯಗಳಿಗೆ ಹೊಲಕ್ಕೆ ತೆರಳಲು ಬಹಳಷ್ಟು ಭಯ ಪಡುತ್ತಿದ್ದಾರೆ. ಚಿರತೆ ತೋಟದಲ್ಲಿ ನಡೆದಾಡಿದ ಹೆಜ್ಜೆಗಳು ಮೂಡಿದ್ದು, ಕೂಲಿಕಾರರು ಕೃಷಿ ಚಟುವಟಿಕೆ ಕೈಗೊಳ್ಳಲು ಹಿಂಜರಿಯುವಂತಾಗಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆಯಾ ಕಟ್ಟಿನ ಸ್ಥಳಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ.
ಜಂಬಗಿ ಕೆ.ಡಿ. ಗ್ರಾಮದ ರೈತ ಗಿರಮಲ್ಲ ಬಿರಾದಾರ ತೋಟದ ಜಮೀನು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹೆಜ್ಜೆ ಗುರುತು ಅಂತ ಖಚಿತ ಪಡಿಸಿದ ಬಳಿಕ ಚಿರತೆ ಸೇರೆಗೆ ಆಯಕಟ್ಟಿನ ಸ್ಥಳದಲ್ಲಿ ಬೋನು ಅಳವಡಿಸಿ ಸೆರೆ ಹಿಡಿಯಲು ಸಿದ್ಧರಾಗಿದ್ದಾರೆ. ಚಿರತೆಯನ್ನು ಶೀಘ್ರ ಸೆರೆ ಹಿಡಿದು ಬೇರೆಡೆ ಸಾಗಿಸಲಾಗುವುದು. ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಜಂಬಗಿ ಕೆ.ಡಿ. ತೋಟದ ವಸ್ತಿಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಬೋನು ಅಳವಡಿಸಿದ್ದು, ಬೋನಿನಲ್ಲಿ ಒಂದು ನಾಯಿಯನ್ನು ಕೂಡಿ ಹಾಕಿರುವುದರಿಂದ ನಾಯಿ ತಿನ್ನಲು ಈ ಸ್ಥಳಕ್ಕೆ ಚಿರತೆ ಬರುತ್ತದೆ. ಬೋನಿಗೆ ಬೀಳುವ ಸಾಧ್ಯತೆ ಇದೆ. ಕಾದು ನೋಡುತ್ತಿದ್ದೇವೆ. ಎಲ್ಲೆಡೆ ಪರಿಶೀಲನೆ ಮಾಡುತ್ತಿದ್ದೇವೆ.
- ಕಿರಣ ದಾಸರೆಡ್ಡಿ, ವಲಯ ಅರಣ್ಯ ಅಧಿಕಾರಿ, ಜಮಖಂಡಿ