ಅರ್ಜಿ ವಿಲೇಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ತೋರಿಸಲಿ

sri-1 (1) (1)
Published on

ಶೃಂಗೇರಿ: ರೈತರು ಸಲ್ಲಿಸಿದ ಅರ್ಜಿ ನಮೂನೆ 51,57 ಹಾಗೂ ವಸತಿ ಸೌಲಭ್ಯಕ್ಕಾಗಿ ಜನಸಾಮಾನ್ಯರು ಸಲ್ಲಿಸಿದ 94 ಸಿ ಹಾಗೂ 94 ಸಿಸಿ ಅರ್ಜಿಗಳು ವಿಲೇವಾರಿ ಆಗದೇ ಗೊಂದಲದ ಗೂಡಾಗಿದ್ದು, ಕಡತಗಳನ್ನು ಕಾನೂನು ಅನ್ವಯ ವಿಲೇವಾರಿ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಕಾಳಜಿ ತೋರಿಸಬೇಕು ಎಂದು ವಕೀಲ ಉಮೇಶ್ ಹೆಗಡೆ ಹೇಳಿದರು.

ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅರಣ್ಯ ಕಾಯ್ದೆ ಕುರಿತು ಮಾತನಾಡಿ, ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಸ್ಥಳ ಪರಿಶೀಲನೆಗೆ ಹೋಗುವಾಗ ಇಲಾಖೆ ಕಾನೂನು ರೀತಿಯಾಗಿ ನೋಟೀಸ್ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ನಂತರ ಶಾಸಕರ ನೇತೃತ್ವದ ಸಭೆಯಲ್ಲಿ ವರದಿ ಮಂಡಿಸಬೇಕು. ಯಾವುದೇ ಅಧಿಕಾರಿಗಳಿಗೆ ಅರ್ಜಿ ಕುರಿತು ಹಸ್ತಕ್ಷೇಪ ಮಾಡುವ ಹಕ್ಕು ಇರುವುದಿಲ್ಲ ಎಂದರು.

ಸಮಸ್ಯೆ ಇದ್ದಲ್ಲಿ ಅರಣ್ಯ ವ್ಯವಸ್ಥಾಪನಾ ಸಮಿತಿ ಅಧಿಕಾರಿಗಳು ಬಂದು ಪರಿಹಾರ ನೀಡುವತ್ತ ಹೆಚ್ಚು ಗಮನ ನೀಡಬೇಕು ಎಸಿ ಹಾಗೂ ಡಿಸಿ ಕೋರ್ಟ್ ಎಂದು ಜಿಲ್ಲಾ ಕೇಂದ್ರಕ್ಕೆ ಅರ್ಜಿದಾರರು ಹೋಗುವ ಬದಲು ಜಿಲ್ಲಾ ಕೇಂದ್ರದ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಸಂವಿಧಾನದಲ್ಲಿ ನಾಗರಿಕರಿಗೆ ಹಲವು ಸೌಕರ್ಯಗಳ ಹಕ್ಕನ್ನು ನೀಡಲಾಗಿದ್ದು ಅದರ ಕುರಿತ ಕಾನೂನಿನ ಅರಿವು ಮೂಡಬೇಕಿದೆ. ಅರ್ಜಿದಾರರ ಅರ್ಜಿ ವಜಾಗೊಂಡರೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಹೇಳಿದರು.

ವಕೀಲ ಸಂಘದ ಅಧ್ಯಕ್ಷ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ,ಪ್ರಧಾನ ಕಾರ್ಯದರ್ಶಿ ಗೋಳ್ಗೋಡು ಚಂದ್ರಶೇಖರ್, ವಕೀಲರಾದ ಪ್ರದೀಪ್, ಚರಣ್, ರಾಜೇಶ್ವರಿ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net