

ಬೇಲೂರು: ನಾಲ್ಕೈದು ತಲೆಮಾರಿನಿಂದ ಖಾತೆಯಾಗದ ರೈತರ ಜಮೀನನ್ನು ಇ-ಪೌತಿ ಖಾತೆ ಮಾಡುವ ಮೂಲಕ ಪೌತಿ ಖಾತೆ ಆಂದೋಲ ನವನ್ನು ಯಶಸ್ವಿಗೊಳಿಸಲು ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಆ್ಯಪ್ ಮೂಲಕ ಇ-ಪೌತಿ ಖಾತಾ ಆಂದೋಲನಕ್ಕೆ ತಾಲೂಕಿನ ಅರೇಹಳ್ಳಿ ನಾಡ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಅರೇಹಳ್ಳಿ ಹೋಬಳಿ ವ್ಯಾಪ್ತಿಯ ರೈತರ ಮನೆ ಮತ್ತು ಜಮೀನುಗಳು ಇತರ ಹೋಬಳಿಗೆ ಹೋಲಿಸಿದರೆ ಬಹಳಷ್ಟು ಅಂತರವಿದೆ. ಇವರಿಗೆ ಸಕಾರದ ಸೌಲಭ್ಯ ಸಿಗುವುದು ಮರೀಚಿಕೆಯಾಗಿದೆ. ಆದ್ದರಿಂದ ಇಲ್ಲಿಂದಲೇ ಇ-ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಿದ್ದೇವೆ. ಅಲ್ಲದೆ ಸಾಕಷ್ಟು ವರ್ಷಗಳಿಂದ ಬಾಕಿ ಇರುವ ಜಮೀನಿನ ಖಾತೆಗಳನ್ನು ಸಂಬಂಧಿಸಿದ ವಾರಸುದಾರರು ಅಥವಾ ಕುಟುಂಬ ಸದಸ್ಯರ ಹೆಸರಿಗೆ ಪೌತಿ ಖಾತೆ ಮಾಡುವ ಮೂಲಕ ಬೇಲೂರು ತಾಲೂಕು ರಾಜ್ಯಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಅಲ್ಲದೆ ಖಾತಾ ಸಂದರ್ಭ ರೈತರ ಸಹಕಾರ ಪಡೆದು ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಈ ಯೋಜನೆಯಿಂದ ಬಹಳಷ್ಟು ಕೃಷಿಕರಿಗೆ ಅನುಕೂಲವಾಗಲಿದ್ದು, ಅದಕ್ಕಾಗಿ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ತಾಲೂಕಿನಲ್ಲಿ 7000 ಪೌತಿಯಾದವರ ಜಮೀನಿನ ಖಾತೆಗಳು ಬದಲಾವಣೆಯಾಗದೆ ಮರಣ ಹೊಂದಿದವರ ಹೆಸರಿನಲ್ಲಿಯೇ ಇದ್ದು, ವಾರಸುದಾರರು ಸರ್ಕಾರದ ಹಲವು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅವರ ಕುಟುಂಬ ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮರಣ ಹೊಂದಿದವರ ಮನೆ ಬಾಗಿಲಿಗೆ ಬರಲಿದ್ದು, ಪೂರಕ ದಾಖಲೆಗಳನ್ನು ನೀಡಿದರೆ ವಾರಸುದಾರರ ಹೆಸರಿಗೆ ನೋಂದಣಿ ಮಾಡಿ ಪೌತಿ ಖಾತೆ ಮಾಡಿಕೊಡಲಿದ್ದಾರೆ. ಇದಕ್ಕೆ ರೈತರು ಸಹಕಾರ ನೀಡಬೇಕು ಎಂದರು.
ತಾಪಂ ಇಒ ವಸಂತ್ ಕುಮಾರ್, ಉಪ ತಹಸೀಲ್ದಾರ್ ಪ್ರದೀಪ್, ಕಂದಾಯ ನಿರೀಕ್ಷಕ ಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.