ಅಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ: ಶಾಸಕ ಜಿ.ಟಿ.ದೇವೇಗೌಡ

51
Published on

ಮೈಸೂರು: ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯಿತಿಯಾಗಿದ್ದು, ಅಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ಅನುಕೂಲವಾದ ಕೆಲಸ ಮಾಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಶೆಟ್ಟನಾಯಕನಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ನುಗ್ಗೇಹಳ್ಳಿ ಮತ್ತು ಡಿ.ಎಂ.ಜಿ. ಹಳ್ಳಿಗಳಲ್ಲಿ ಸ್ವಾಗತ ಮಹಾದ್ವಾರದ ಉದ್ಘಾಟನೆ, ಬಸ್‌ನಿಲ್ದಾಣಕ್ಕೆ ಭೂಮಿ ಪೂಜೆ, ಗ್ರಾ.ಪಂ. ಕಚೇರಿಯ ಕಟ್ಟಡದ ಮೇಲ್ಭಾಗದಲ್ಲಿ ಮೀಟಿಂಗ್ ಹಾಲ್‌ಗೆ ಭೂಮಿ ಪೂಜೆ ಸೇರಿದಂತೆ ಸುಮಾರು 56 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನಿಗೆ ಶುದ್ಧ ನೀರು ಬಹಳ ಮುಖ್ಯವಾಗಿರುವುದರಿಂದ ಈ ಪಂಚಾಯಿತಿಯ ಬಹುತೇಕ ಗ್ರಾಮಗಳಲ್ಲಿ ನಿರ್ಮಿಸಿದ್ದೇವೆ. ಇಲ್ಲಿಯ ಪಿಡಿಒ ರುಕ್ಮಾಂಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ. 2024-25ನೇ ಸಾಲಿನಲ್ಲಿ ಈ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಪ್ರಶಸ್ತಿಯೂ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನರಿಗೆ ಶಿಕ್ಷಣ, ಆರೋಗ್ಯ, ಗ್ರಾಮ ನೈರ್ಮಲ್ಯವನ್ನು ಜವಾಬ್ದಾರಿಯಿಂದ ಮಾಡಿದ್ದಾರೆ. ಈ ಗ್ರಾಮ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜನರು ಒಗ್ಗಟ್ಟಾಗಿ ಯಾವುದೇ ದ್ವೇಷ, ಅಸೂಯೆಗಳಿಗೆ ಆಸ್ಪದ ನೀಡದೇ ಬೆಂಬಲ ನೀಡುತ್ತಾ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಎಲ್ಲ ಹಳ್ಳಿಗಳನ್ನು ಅಭಿವೃದ್ಧಿ ಮಾಡಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದರು.

ಗ್ರಾಪಂ ಅಧ್ಯಕ್ಷೆ ಎಂ.ವನಿತಾ, ಉಪಾಧ್ಯಕ್ಷೆ ಮಂಗಳಮ್ಮ, ಪಿಡಿಒ ರುಕ್ಮಾಂಗದ, ಶಾಸಕರ ಆಪ್ತ ಸಹಾಯಕ ಹನುಮೇಶ್, ಎಪಿಎಂಸಿ ಮಾಜಿ ಸದಸ್ಯ ಕೋಟೆಹುಂಡಿ ಮಹಾದೇವ್, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net