

ಹುಬ್ಬಳ್ಳಿ: ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ, ಅದರಲ್ಲೂ ಸಿಸಿ ರಸ್ತೆ, ಒಳಚರಂಡಿ ಪೈಪ್ ಲೈನ್ ಕಾಮಗಾರಿಗಳು ಕೈಗೊಳ್ಳುವ ಮುನ್ನ ಪೂರ್ವಸಿದ್ಧತೆ ಇಲ್ಲದೇ ಬಹಳಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶವ್ಯಕ್ತಪಡಿಸಿದರು.
ನಗರದ ವಾರ್ಡ್ ನಂ. 72ರ ಕಟಗರ ಓಣಿ ಹಾಗೂ ಕರ್ಜಗಿ ಓಣಿಯಲ್ಲಿ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಿರಂತರ ನೀರು ಯೋಜನೆಗೆ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆಯಲಾಗಿದೆ. ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ರೀತಿ ಮುಂದುವರಿದರೆ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಪೂರ್ವಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರಕ್ಕೆ ಹೊಸದಾಗಿ ಮೂರು ಮೌಲಾನ ಆಜಾದ್ ಶಾಲೆಗಳು ಮಂಜೂರಾಗಿವೆ. ಅಲ್ಲದೇ ಮೂರು ಶಾಲೆಗಳು ಪ್ರೌಢಶಾಲೆಯಿಂದ ಪಪೂ ಕಾಲೇಜಿಗೆ ಉನ್ನತಿಕರಣಗೊಂಡಿವೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಲೋಕೇಶ ಗುಂಜಾಳ, ಆರೀಫ್ ದೊಡ್ಡಮನಿ, ಮುಖಂಡರಾದ ಖಾದರಅಲಿ ಜಮಾದಾರ, ಬಾಬಾ ಧಾರವಾಡ, ಸೈಯದಅಲಿ ಮುಲ್ಲಾ, ಮುಸ್ತಾಕ ಅತ್ತಾರ, ಅಧಿಕಾರಿಗಳಾದ ಸೊಬರದ, ಬ್ರಹ್ಮಲಿಂಗೇಶ್ವರ, ಇತರರು ಇದ್ದರು.