ಕೆಂಪೇಗೌಡ ಲೇಔಟ್​ನಲ್ಲಿ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ತರಾಟೆ

layout visit (1)
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.

ಮಂಗಳವಾರ ಕೆಂಪೇಗೌಡ ಲೇಔಟ್ ಹಾಗೂ ವಿವಿಧ ವಸತಿ ಯೋಜನೆಗಳ ವೀಕ್ಷಣೆ ವೇಳೆ ಅವರು ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವತ್ತ ಹೆಚ್ಚಿನ ಲಕ್ಷ್ಯ ವಹಿಸಬೇಕು. ಯಾವುದೇ ಸಬೂಬು ಹೇಳದೆ ಗುತ್ತಿಗೆದಾರರಿಂದ ಕೆಲಸ ತೆಗೆಸಬೇಕು. ಕೋರ್ಟ್ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಎ.ಹ್ಯಾರಿಸ್, ಕೆಲ ಕಾರಣಗಳಿಂದ ಬಡಾವಣೆಯಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೋರ್ಟ್ ಕೇಸ್ ಇದ್ದ ಕಾರಣ ಕೆಲ ಬ್ಲಾಕ್‌ಗಳಲ್ಲಿ ಕೆಲಸ ಆರಂಭಿಸಲಾಗಿಲ್ಲ. ಇದರ ಹೊರತಾಗಿಯೂ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ರಸ್ತೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದ್ಯ ಶೇ.80 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕೆಲಸವನ್ನು ತ್ವರಿತಗೊಳಿಸಲಾಗುವುದು. ಈಗಾಗಲೇ 90 ಮಂದಿ ಮನೆಗಳನ್ನು ನಿರ್ಮಿಸಲು ಅರ್ಜಿ ಸಲ್ಲಿಸಿದ್ದು, ಅವುಗಳಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಕೆಲ ಬ್ಲಾಕ್‌ಗಳಲ್ಲಿ ಸೌಕರ್ಯ ಕಲ್ಪಿಸಿದ್ದರೂ, ಸೈಟ್ ಹಂಚಿಕೆ ಪಡೆದವರು ಮನೆ ನಿರ್ಮಿಸಲು ಮುಂದೆ ಬಂದಿಲ್ಲ. ಈ ಬಗ್ಗೆ ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂಬುದು ತಿಳಿದಿಲ್ಲ. ಮನೆ ನಿರ್ಮಿಸುವವರಿಗೆ ಸೌಕರ್ಯ ಒದಗಿಸಲು ಪ್ರಾಧಿಕಾರ ಬದ್ಧವಾಗಿದ್ದು, ಸಾರ್ವಜನಿಕರು ತಮ್ಮ ಸೈಟ್‌ಗಳಲ್ಲಿ ಮನೆ ನಿರ್ಮಿಸಲು ಮುಂದಾಗಬೇಕು. 5 ವರ್ಷದಲ್ಲಿ ಈ ಬಡಾವಣೆ ನಗರ ಅತ್ಯುತ್ತಮ ಲೇಔಟ್ ಆಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಾಧಿಕಾರ ನಿರ್ಮಿಸಿರುವ ಕಣಮಿಣಿಕೆ, ಕೊಮ್ಮಘಟ್ಟ ವಸತಿ ಸಮುಚ್ಚಯಗಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಡಾವಣೆಯಲ್ಲಿ ಹಾದುಹೋಗಿರುವ ಎಂಎಆರ್ ರಸ್ತೆಯನ್ನು ವೀಕ್ವಿಸಿದರು.

ಈ ವೇಳೆ ಬಿಡಿಎ ಆಯುಕ್ತ ಎನ್.ಜಯರಾಮ್, ಅಭಿಯಂತರ ಸದಸ್ಯ ಡಾ. ಎಚ್.ಆರ್.ಶಾಂತರಾಜಣ್ಣ ಹಾಗೂ ಹಿರಿಯ ಇಂಜಿನಿಯರ್‌ಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net