ಚಿರತೆಯಲ್ಲ ಹೈನಾ ಎಂದ ಅಧಿಕಾರಿಗಳು

Officials said it was a hyena and not a leopard
ಕೃಷ್ಣಾ ನದಿ ತೀರದ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮ ವ್ಯಾಪ್ತಿಯ ಕಬ್ಬಿನ ಹೊಲವೊಂದರಲ್ಲಿ ಕರುವಿನ ಮೃತದೇಹವನ್ನು ಪಿಎಸೈ ಸಂಜಯ್​ ತಿಪ್ಪರಡ್ಡಿ ಅರಣ್ಯಾಧಿಕಾರಿಗಳು, ಗ್ರಾಮಸ್ಥರೊಂದಿಗೆ ಪರಿಶೀಲಿಸಿದರು. ಶಂಕರಗೌಡ ಶಿವಣಗಿ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಕಂದಗನೂರ, ಬಳಬಟ್ಟಿ, ವಡವಡಗಿ ಗ್ರಾಮಗಳ ವ್ಯಾಪ್ತಿಯ ಕಬ್ಬಿನ ಹೊಲಗಳಲ್ಲಿ ಚಿರತೆ ಓಡಾಡುತ್ತಿದೆ ಎನ್ನುವ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಆತಂಕ ಸೃಷ್ಟಿಸಿದ್ದು ಅರಣ್ಯ ಮತ್ತು ಪೊಲೀಸ್​ ಇಲಾಖೆ ಅಧಿಕಾರಿಗಳು ಸೋಮವಾರ ಸಂಜೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಂತರ ಇದನ್ನು ಅಲ್ಲಗಳೆದಿದ್ದಾರೆ.

ಎರಡು ದಿನಗಳ ಹಿಂದೆ ಬಳಬಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಕುರಿಯೊಂದರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ಕಂದಗನೂರ ಗ್ರಾಮ ವ್ಯಾಪ್ತಿಯಲ್ಲಿ ಆಕಳು ಮತ್ತು ಎಮ್ಮೆ ಕರುಗಳ ಮೃತದೇಹ ಪತ್ತೇ ಆಗಿವೆ. ಇದಕ್ಕೂ ಮುನ್ನ ನಾಯಿಯೊಂದನ್ನು ಬೇಟೆಯಾಡಿ ಸಾಯಿಸುವ ವಿಫಲ ಯತ್ನ ಕಂಡು ಬಂದಿದೆ.

ಆದರೆ ಇವೆಲ್ಲ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಮಾಂಸ ತಿಂದಿರುವ ರೀತಿ ನೋಡಿದರೆ ಇದು ಚಿರತೆ ಬೇಟೆಯಾಡಿದ್ದಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಚಿರತೆ ಪ್ರಾಣಿಯ ಕುತ್ತಿಗೆ ಕಚ್ಚಿ ಹಿಡಿದು ರಕ್ತ ಹೀರಿ ಬೇಟೆಯಾಡುತ್ತದೆ. ಈ ಟನೆಗಳಲ್ಲಿ ಅಂಥದ್ದು ಕಂಡುಬಂದಿಲ್ಲ. ಇದು ಹೈನಾ ಬೇಟೆಯಾಡುವ ರೀತಿಯಾಗಿದೆ ಎನ್ನುವ ಸಂಶಯ ತಲೆದೋರಿದೆ.

ಸ್ಥಳದಲ್ಲಿ ಬೇಟೆಯಾಡಿದ ಪ್ರಾಣಿಯ ಹೆಜ್ಜೆ ಗುರುತುಗಳು ಅಸ್ಪಷ್ಟವಾಗಿವೆ. ಆದರೆ ಚಿರತೆಯದ್ದಲ್ಲ ಅನ್ನೋದು ಗೊತ್ತಾಗಿದೆ. ಆದರೂ ಬೇಟೆಯಾಡಿದ ಸ್ಥಳಗಳಲ್ಲಿ ಮುಂಜಾಗರೂಕತಾ ಕ್ರಮವಾಗಿ ಬೋನನ್ನು ಇಡಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಐ. ಬಿರಾದಾರ ಅವರು ತಿಳಿಸಿದ್ದಾರೆ.

ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಂದಗನೂರ ಗ್ರಾಮದ ಶಂಕರಗೌಡ ಶಿವಣಗಿ, ಮಾತನಾಡಿ, ಬೀಯಪ್ಪ ಬೋಳಿ ಇವರ ಹೊಲದಲ್ಲಿ ಆಕಳ ಕರುವಿನ ಮೃತದೇಹ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಕಬ್ಬಿನ ಹೊಲದಲ್ಲಿ ಚಿರತೆ ಓಡಾಡುವ ವಿಡಿಯೋಗಳು ಹರಿದಾಡುತ್ತಿವೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಶೇಖರಯ್ಯಾ ಮಠ, ಶಿವನಗೌಡ ಪಾಟೀಲ, ಅಬ್ದುಲ್​ ನಾಯ್ಕೋಡಿ, ಮೈಬುಸಾ ವಾಲಿಕಾರ, ಮಾಂತೇಶ ತಮದಡ್ಡಿ, ಶಂಕರಗೌಡ ಬಿರಾದಾರ, ಶಿವಪ್ಪ ಹುಲ್ಲಳ್ಳಿ, ಶಿವಯ್ಯ ಕೋಟಿ ಇನ್ನಿತರರೊಂದಿಗೆ ಪೊಲೀಸ್​ ಮತ್ತು ಅರಣ್ಯಾಧಿಕಾರಿಗಳು ಸಂಚರಿಸಿ ಪರಿಶೀಲಿಸಿದ್ದು ಇದು ಚಿರತೆ ಅಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ಆದರೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಒಬ್ಬೊಬ್ಬರೇ ತಿರುಗಾಡುವ ಬದಲು ಗುಂಪಾಗಿ ತಿರುಗಾಡಬೇಕು ಎಂದು ಕೋರಿದ್ದಾರೆ.

ಪಿಎಸೈ ಸಂಜಯ್​ ತಿಪ್ಪರಡ್ಡಿ ಸಹಿತ ಪೊಲೀಸ್​ ಸಿಬ್ಬಂದಿಗಳ ಜೊತೆ ಕಂದಗನೂರ ಗ್ರಾಮ ವ್ಯಾಪ್ತಿಯಲ್ಲಿ ಪ್ರಾಣಿಗಳ ಶವ ದೊರೆತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಆತಂಕಕ್ಕೊಳಗಾಗದಂತೆ, ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net