

ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ದೇಗುಲದ ಬಳಿ ಅನಧಿಕೃತ ಪ್ರಾಣಿ, ಪಕ್ಷಿಗಳ ಪಾಲನಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಪೆಟಾ ಸಂಸ್ಥೆ ದೂರಿನನ್ವಯ ಜಿಲ್ಲಾಡಳಿತದ ಸೂಚನೆಯಂತೆ ಬುಧವಾರ ಪ್ರಾಣಿಪಕ್ಷಿ ಪಾಲನಾ ಕೇಂದ್ರಕ್ಕೆ ದಾಳಿ ನಡೆಸಲಾಯಿತು.
ಸೆಂಟರ್ ಮಾಲೀಕರ ಸಾಕಷ್ಟು ಪ್ರತಿರೋಧದ ನಡುವೆ ಪೊಲೀಸರ ಉಪಸ್ಥಿತಿಯಲ್ಲಿ ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸಲಾಯಿತು. ಪೆಟಾ ದೂರಿನನ್ವಯ ಇಲ್ಲಿನ ಪ್ರಾಣಿ, ವನ್ಯ ಜೀವಿಯಡಿ ಬರುವ ಪಕ್ಷಿಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಈ ಹಿಂದೆ ಜಿಲ್ಲಾಡಳಿತ ನೇತೃತ್ವದ ಪ್ರಾಣಿದಯಾ ಸಂಘ ಸೂಚನೆಯಂತೆ ನೋಟಿಸ್ ನೀಡಲಾಗಿತ್ತು.
ಪಶುಸಂಗೋಪನಾ ಇಲಾಖೆ ಪ್ರಮುಖರು, ಪೊಲೀಸರು, ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಪೆಟಾ ಸಂಸ್ಥೆ ಮುಖ್ಯಸ್ಥರಾದ ಮೀತ್ ಅಶರ್, ಸಿಂಚನಾ ಸುಬ್ರಹ್ಮಣ್ಯ, ಸ್ವಯಂಸೇವಕರ ತಂಡ ದೆಹಲಿ ಮುಂತಾದ ಕಡೆಗಳಿಂದ ಜಿಲ್ಲೆಗೆ ಕಾರ್ಯಾಚರಣೆಗಾಗಿ ಆಗಮಿಸಿದ್ದರು.
ಅಧಿಕಾರಿಗಳ ಸಮ್ಮುಖದಲ್ಲಿ ಜಾನುವಾರುಗಳು, ಮನೆಯ ಒಂದೆರಡು ನಾಯಿ ಹೊರತುಪಡಿಸಿ ಮಿಕ್ಕುಳಿದ ನಾಯಿ, ಬೆಕ್ಕು, ಗಿಳಿಗಳು, ಬಾತುಕೋಳಿ ಸೇರಿದಂತೆ ವಿವಿಧ ಜಾತಿಯ ಪಕ್ಷಿ, ಪ್ರಾಣಿಗಳನ್ನು ವಶಕ್ಕೆ ಪಡೆದರು. ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಮೂಲಕ ಪಿಲಿಕುಳ ನಿಸರ್ಗಧಾಮ, ಅಧಿಕೃತ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.
ಕಾರ್ಯಾಚರಣೆಗೆ ಮುನ್ನ ಸರಿಯಾದ ನೋಟಿಸ್ ಜಾರಿ ಮಾಡಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಮಾನವ ಹಕ್ಕು ರಾಜ್ಯ ಪ್ರಧಾನ ಕಾರ‌್ಯದರ್ಶಿ ದಿನೇಶ್ ಗಾಣಿಗ ಕೋಟ ತಿಳಿಸಿದರು.
ಕೋಟ ಠಾಣಾಧಿಕಾರಿ ರಾಘವೇಂದ್ರ ಪಿ., ಕ್ರೈಂ ವಿಭಾಗ ಪಿಎಸ್‌ಐ ಸುಧಾಪ್ರಭು, ಎಎಸ್‌ಐ ಜಯಪ್ರಕಾಶ್, ಎಎಸ್‌ಐ ಗೋಪಾಲ ಪೂಜಾರಿ, ಪಶುಪಾಲನೆ ಇಲಾಖೆ ಮುಖ್ಯ ಪಶುವೈದ್ಯ ಡಾ.ಪ್ರದೀಪ್, ಡಾ.ಸೂರಜ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಆರೋಗ್ಯ ವಿಭಾಗದ ಮಮತಾ, ಕಂದಾಯ ನಿರೀಕ್ಷಕ ದೀಪಕ್, ಅರಣ್ಯ ಇಲಾಖೆ ಮಾಲ್ತೇಶ್ ಇದ್ದರು.