ಹುಕ್ಕಾ ಬಾರ್ ಮೇಲೆ ಅಧಿಕಾರಿಗಳ ದಾಳಿ

SRP_25-02(a)jpj
Published on

ಶ್ರೀರಂಗಪಟ್ಟಣ : ಪಟ್ಟಣದ ರೆಸ್ಟೊರೆಂಟ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸುವ ಜತೆಗೆ ಹುಕ್ಕಾಗಳನ್ನು ವಶಪಡಿಸಿಕೊಂಡರು.

ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದ ಸ್ಮೂಕಾದಲ್ಲಿ ಹುಕ್ಕಾ ಬಾರ್ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌ರ ಮಾರ್ಗದರ್ಶನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗ ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯಲ್ಲಿದ್ದವರಿಗೆ ಕರಪತ್ರಗಳನ್ನು ವಿತರಿಸಿ ತಿಳಿವಳಿಕೆ ನೀಡುವ ಜತೆಗೆ ಕೋಟ್ಪಾದ ಸೆಕ್ಷನ್ 4ರ ಅಡಿ 24 ಪ್ರಕರಣ ದಾಖಲಿಸಿ 4800 ರೂ. ದಂಡ ಹಾಗೂ ಸೆಕ್ಷನ್ 6ಎ ಅಡಿ 1 ಪ್ರಕರಣ ದಾಖಲಿಸಿ 200 ರೂ. ದಂಡ ಸೇರಿದಂತೆ ಒಟ್ಟು 25 ಪ್ರಕರಣ ದಾಖಲಿಸಿ 5000 ರು. ದಂಡ ವಿಧಿಸಿ ಹುಕ್ಕಾ ವಸ್ತುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದರು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರ ಎಸ್.ಎನ್.ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್ ಹಾಗೂ ಫಣೀಂದ್ರ, ಶ್ರೀರಂಗಪಟ್ಟಣ ಟೌನ್ ಠಾಣೆಯ ಎಎಸ್‌ಐ ಉದಯಶಂಕರ್ ಭರತ್, ಸಚಿನ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net