

ಕಾನೂನಿನ ಭಯವಿಲ್ಲದೆ ನಡೆದಿದೆ ಅಪ್ರಾಪ್ತರ ಮದುವೆ| ಜನರಲ್ಲಿ ಬೇಕಿದೆ ಮತ್ತಷ್ಟು ಜಾಗೃತಿ
ಗಂಗಾಧರ್ ಬೈರಾಪಟ್ಟಣ
ರಾಮನಗರ: ಬಾಲ್ಯ ವಿವಾಹ ಶಿಷಾರ್ಹ ಅಪರಾಧ ಎನ್ನುವ ವಿಚಾರಗೊತ್ತಿದ್ದರೂ ಕಳೆದ ಆರು ವರ್ಷಗಳಲ್ಲಿ 312 ಬಾಲ್ಯ ವಿವಾಹ ನಡೆಸಲು ಮುಂದಾದ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ 2020 ರಿಂದ 2025ರ ಸೆಪ್ಟಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 312 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 257 ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ನಡೆದೇ ಹೋದ 55 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಕ್ಕಳ ಪಾಲಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
55 ಪ್ರಕರಣ ದಾಖಲು: ಜಿಲ್ಲೆಯಲ್ಲಿ ಕಳೆದ 6 ವರ್ಷಗಳ ಅವಧಿಯಲ್ಲಿ 55 ಬಾಲ್ಯ ವಿವಾಹಗಳು ನಡೆದೇ ಹೋಗಿವೆ. ಕರೋನಾ ಅವಧಿಯಲ್ಲಿ ಹೆಚ್ಚು ಪ್ರಕರಣಗಳು ನಡೆದಿದ್ದರೂ, ನಂತರದ ವರ್ಷಗಳಲ್ಲೂ ಕಾನೂನಿನ ಭಯವಿಲ್ಲದೆ, ಬಾಲ್ಯ ವಿವಾಹಗಳು ನಡೆದಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ.
ಇವುಗಳಲ್ಲಿ ಬಹುತೇಕ ಹೆಚ್ಚಿನ ಪ್ರಕರಣಗಳಲ್ಲಿ ಮದುವೆ ನಂತರವೇ ಸಹಯಾವಾಣಿಗೆ ಕರೆಗಳು ಬರುತ್ತಿದ್ದು, ಇದನ್ನು ಪರಿಶೀಲನೆ ನಡೆಸಿದ ನಂತರವಷ್ಟೇ ಅಪ್ರಾಪ್ತರಿಗೆ ಮದುವೆ ಆಗಿರುವುದು ಬೆಳಕಿಗೆ ಬರುತ್ತಿದೆ. ಬಹುತೇಕ ಮದುವೆಗಳು ದೇವಾಲಯದ ಅಂಗಳ, ಇಲ್ಲವೇ ಮನೆಯಂಗಳದಲ್ಲಿ ನಡೆಯುತ್ತಿವೆ. ಇಂತಹ ಅವಕಾಶವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಾಕಷ್ಟು ಬಾಲ್ಯವಿವಾಹಗಳು ನಡೆದು ಹೋಗಿವೆ.
ಬಹುತೇಕ ಮದುವೆಗಳು ಗುಟ್ಟಾಗಿಯೇ ನಡೆದಿರುವುದು ಅಧಿಕಾರಿಗಳ ಚಿಂತೆಯನ್ನು ಹೆಚ್ಚುವಂತೆ ಮಾಡಿದೆ. ಕಲ್ಯಾಣ ಮಂಟಪ, ಸಮೂದಾಯ ಭವನಗಳಲ್ಲಿ ಮದುವೆ ಆದರೆ ಸಾಕ್ಷ್ಯಗಳು ಲಭ್ಯವಾಗುತ್ತವೆ. ಆದರೆ ಅಪ್ತಾಪ್ತರ ಮದುವೆಗಳು ಗೌಪ್ಯವಾಗಿಯೇ ನಡೆಯುತ್ತವೆ. ಒಂದು ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದರೂ ಜನರು ಮದುವೆ ನಡೆದೇ ಇಲ್ಲ ಎನ್ನುವಂತೆ ಸಿಬ್ಬಂದಿ ಮೇಲೆ ವಾಗ್ಯುದ್ದ ನಡೆಸಿದ ಟನೆಗಳು ನಡೆದಿವೆ.
ಇದರ ಹೊರತಾಗಿಯೂ ಮದುವೆ ನಡೆದಿರುವುದಕ್ಕೆ ಸಾಕ್ಷ್ಯಗಳು ಸಿಕ್ಕರೆ ಖಂಡಿತವಾಗಿ ಪ್ರಕರಣ ದಾಖಲು ಮಾಡಲಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಮತ್ತೊಂದು ನೆಮ್ಮದಿಯ ಸಂಗತಿ ಎಂದರೆ ಅಧಿಕಾರಿಗಳು 257 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ಇಲ್ಲವಾದರೆ ಆಟ ಪಾಠಗಳ ಮೂಲಕ ಬೆಳವಣಿಗೆ ಕಾಣಬೇಕಿದ್ದ ಮಕ್ಕಳು, ಸಂಸಾರ ಬಂಧನದಲ್ಲಿ ಸಿಲುಕಿ ಬದುಕು ಕಳೆದುಕೊಳ್ಳಬೇಕಿತ್ತು.
ಸಹಾಯವಾಣಿಗೆ ಬರುವ ಕರೆಗಳಲ್ಲಿ ಅತಿ ಹೆಚ್ಚಿನ ಕರೆಗಳು ಅಂತಿಮ ಹಂತದಲ್ಲಿ ಬರುತ್ತವೆ. ಮದುವೆ ಹಿಂದಿನ ದಿನ ಇಲ್ಲವೇ, ಮದುವೆ ಮುಗಿಯುವ ವೇಳೆಗೆ ಮಾಹಿತಿ ಇಲಾಕೆಗೆ ದೊರೆತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆ ತಡೆಯುವ ವೇಳೆಗಾಗಲೇ ಮದುವೆಗಳು ಆಗಿ ಹೋಗಿರುತ್ತವೆ. ಸ್ಥಳಿಯವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಅಪ್ರಾಪ್ತರ ಮದುವೆ ಮಾಹಿತಿ ಇದ್ದರೂ, ಸ್ಥಳಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟವಲ್ಲದೇ ಮಾಹಿತಿಯನ್ನು ನೀಡುವುದಿಲ್ಲ. ಕೆಲವರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ.
ಇನ್ನು ಕೆಲವು ಸಂದರ್ಭದಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವೂ ಸಾರ್ವಜನಿಕರಿಂದ ಆಗುತ್ತಿವೆ. ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳ ಪೊಲಿಸರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರೆ ಅಲ್ಲಿ ಮದುವೆ ನಡೆಯದೇ ಇರುವುದು ಕಂಡು ಬಂದಿದೆ. ಇದರ ಜತೆಗೆ, ಮದುವೆ ಆಗಿದ್ದರೂ ಪ್ರಾಪ್ತ ವಯಸ್ಸಿಗೆ ಮರುವೆ ಮಾಡಿರುವುದು ಸಹ ಕಂಡು ಬಂದಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.
ಮದುವೆ ಮಾಡಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು, ಇಲ್ಲ ಒಳ್ಳೆಯ ಕಡೆ ಸಂಬಂಧ ಬಂದಿದೆ, ಅಥವಾ ಇನ್ನಾವುದೋ ಒತ್ತಡಕ್ಕೆ ಮಣಿದು 18 ವರ್ಷ ಮೀರದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದು ಅಪರಾಧವಾಗಿದ್ದು, ಇದಕ್ಕೆ ಜೈಲು ಶಿೆಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳ ಬಾಳನ್ನು ಹಾಳು ಮಾಡುವ ಜತೆಗೆ, ತಮ್ಮ ಜೀವನವನ್ನು ಕಳೆದುಕೊಳ್ಳಬೇಡಿ. ಸರ್ಕಾರದ ನಿಗಧಿಪಡಿಸಿರುವ ವಯಸ್ಸಿಗಿಂತ ಚಿಕ್ಕವಯಸ್ಸಿಗೆ ಮದುವೆ ಮಾಡುವುದಕ್ಕೆ ತಾವೇ ಕ್ರಮವಹಿಸಬೇಕಿದೆ.
ಇನ್ನು ಮಾಗಡಿಯಲ್ಲಿ ಕಾನೂನಿನಂತೆ 21 ವರ್ಷ ಮೀರದ ಯುವಕ ಮದುವೆ ಆಗಿದ್ದ. ಇಲ್ಲಿ ಯುವತಿಗೆ 18 ವರ್ಷ ಆಗಿದ್ದ ಕಾರಣ, ಅಪ್ರಾಪ್ತ ಯುವಕನನ್ನು ಮದುವೆ ಆದ ಕಾರಣಕ್ಕೆ ಯುವತಿ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದ ಮೂಲಕ ಕಾನೂನು ಯಾರನ್ನೂ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
===
ವರ್ಷ ವರದಿ ತಡೆ ಪ್ರಕರಣ
2020 095 083 012
2021 111 099 012
2022 050 044 006
2023 011 002 009
2024 029 021 008
2025 016 008 008
ಒಟ್ಟು 312 257 055
===
ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು, ಇದರ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಸಾರ್ವಜನಿಕರೂ ಸಹ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಪ್ರಾಪ್ತರ ಮದುವೆ ಬಗ್ಗೆ ಮಾಹಿತಿ ನೀಡಬೇಕು. ಈ ಸಂಬಂಧ ದೇವಾಲಯಗಳು ಅರ್ಚಕರು, ಮಸೀದಿಗಳ ಮೌಲ್ವಿಗಳಿಗೂ ಸಹ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ರಜನಿ, ಡಿಸಿಪಿಓ, ಬೆಂಗಳೂರು ದಕ್ಷಿಣ ಜಿಲ್ಲೆ
===