

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರಿ ಕೆಲಸದಲ್ಲಿದ್ದರೂ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ತೋರುವವರೇ ಹೆಚ್ಚು. ಆದರೆ ಇವರು ಉನ್ನತ ಹುದ್ದೆಯ ಅಹಂ ಬಿಟ್ಟು ಸ್ವತಃ ಶಾಲೆಗೆ ಬಣ್ಣ ಬಳಿಯುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ, ಶಿವಮೊಗ್ಗ, ಕೊಪ್ಪಳ ಹಾಗೂ ಧಾರವಾಡದ ಪರಿಸರ ಪ್ರೇಮ ತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ತೊದಲಬಾಗಿ ಈ ಕಾರ್ಯ ಮಾಡಿದ್ದಾರೆ.
ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಹುಬ್ಬಳ್ಳಿಯ ಬ್ಯಾಂಕ್ ಆಫ್ ಬರೋಡಾ, ಹುಬ್ಬಳ್ಳಿಯ ಪಾವರ್ ಆಫ್ ಯುಥ್ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಇಡೀ ದಿನ ಶಾಲೆಗೆ ಬಣ್ಣದರ್ಪಣೆ ಮಾಡಿದ್ದಾರೆ. ಕೇವಲ ಬಣ್ಣ ಬಳಿಯುವುದಲ್ಲದೆ, ಗೋಡೆಗಳ ಮೇಲೆ ಮಕ್ಕಳ ಕಲಿಕೆಗೆ ಪ್ರೇರಣೆ ನೀಡುವಂತಹ ಚಿತ್ರಗಳನ್ನು ಬಿಡಿಸಿ ಗ್ರಾಮಸ್ಥರ, ಶಿಕ್ಷಕರ ಮನಸ್ಸು ಗೆದ್ದಿದ್ದಾರೆ.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ವಿ. ಶ್ರೀಹರಿ ಮಾತನಾಡಿ, ಮಲ್ಲಿಕಾರ್ಜುನ ಅವರ ಕಾರ್ಯ ಮೆಚ್ಚುವಂತಹದ್ದು. ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವುದರ ಜತೆಗೆ ಆ ಊರಿನ ಒಂದು ಹೆಣ್ಣು ಮಗಳ ಹೆಸರಿನಲ್ಲಿ ಸಸಿ ನೆಟ್ಟು ಪರಿಸರಪ್ರೇಮ ಮೆರೆದ ತಂಡಕ್ಕೆ ಅಭಿನಂದನೆ. ಮುಂದಿನ ದಿನಗಳಲ್ಲಿ ನಡೆಸುವ ಬಣ್ಣದರ್ಪಣ ಕಾರ್ಯಕ್ಕೆ ಬ್ಯಾಂಕ್ ಕೈ ಜೋಡಿಸಲಿದೆ ಎಂದರು.
ಬ್ಯಾಂಕ್ ಮ್ಯಾನೇಜರ್ ಚೈತನ್ಯ ನಾಡಿಗೇರ ಮಾತನಾಡಿ, ಬ್ಯಾಂಕ್ ಸಹಯೋಗದಲ್ಲಿ ಹೆಬ್ಬಳ್ಳಿ ಗ್ರಾಮದ ಉರ್ದು ಪ್ರಾಥಮಿಕ ಶಾಲೆಗೆ ಬಣ್ಣದರ್ಪಣ ಮಾಡಿ ಹೊಸ ಕಳೆ ಮೂಡಿಸಿದ ಮಲ್ಲಿಕಾರ್ಜುನ ತೊದಲಬಾಗಿ ಕಾರ್ಯ ಶ್ಲಾಘನೀಯ ಎಂದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೌಲಾಸಾಬ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಇಸ್ಲಾಂ ಜಮಾತಿನ ಅಧ್ಯಕ್ಷ ಮಹಬೂಬಸಾಬ ಗುಡಸಲಮನಿ, ಪತ್ತೆಸಾಬ ಗುಡಸಲಮನಿ, ಮೌಲಾಸಾಬ ಸವಣೂರ, ದಾವಲಸಾಬ ಎಲಿಗಾರ, ಧರ್ಮಗುರು ಮೌಲಾನಾ ಶಾಕೀರಲಿ, ಗ್ರಾಮೀಣ ಶಿಕ್ಷಕರ ಸಂಘದ ಮಲ್ಲಿಕಾರ್ಜುನ ಉಪ್ಪಿನ, ರವಿಚಂದ್ರನ್ ದೊಡ್ಡಿಹಾಳ, ಎಸ್.ಬಿ. ವಾಲೀಕಾರ, ನಿರ್ಮಲಾ ದೇಸಾಯಿ, ಬ್ಯಾಂಕ್ ಸಿಬ್ಬಂದಿ, ಎಲ್. ಐ. ಲಕ್ಕಮ್ಮನವರ, ಇತರರು ಇದ್ದರು.