ಕಿರಗುಂದ ಶಾಲೆ ಶಿಕ್ಷಕಿಯರ ವಿರುದ್ಧ ಕ್ರಮಕೈಗೊಳ್ಳದ ಅಧಿಕಾರಿಗಳು

D.9-MDG-2P1
Published on

ಮೂಡಿಗೆರೆ: ಶಾಲೆಯಲ್ಲಿ ಮಕ್ಕಳ ಎದುರು ದಿನನಿತ್ಯ ಜಗಳ ಮಾಡಿಕೊಂಡು ಪಾಠ ಮಾಡದೆ ಬೇಕಾ ಬಿಟ್ಟಿಯಾಗಿ ವರ್ತಿಸುತ್ತಿರುವ ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂವರು ಶಿಕ್ಷಕಿಯರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಸೋಮವಾರ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಹರಿಭಾರ್ಗವ ಮಾತನಾಡಿ, ಶಿಕ್ಷಕಿಯರು ಮಕ್ಕಳ ಎದುರು ನಿರಂತರವಾಗಿ ಜಗಳ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿದೆ. ಹಿಂದೆ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಈಗ ಗ್ರಾಮಸ್ಥರು ಬೇರೆ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದ್ದಾರೆ. ಈ ಶಾಲೆಯಲ್ಲಿ 34 ಮಕ್ಕಳು ಇದ್ದಾರೆ. ಇದೆ ರೀತಿ ಮುಂದುವರಿದರೆ ಇನ್ನೆರಡು ವರ್ಷದಲ್ಲಿ ಶಾಲೆ ಮುಚ್ಚುವ ಹಂತಕ್ಕೆ ತಲುಪಲಿದೆ ಎಂದು ದೂರಿದರು.
ಶಾಲೆಯ ರಂಗಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಪ್ರತಿಷ್ಠಾಪನೆಗೆ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಮನವಿ ನೀಡಿದ ಮೇರೆಗೆ ಕಳೆದ ವಾರ ಶಾಲೆಯಲ್ಲಿ ಎಸ್‌ಡಿಎಂಸಿ ಸಭೆ ಕರೆದು ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಆದರೆ ಮುಖ್ಯಶಿಕ್ಷಕಿ ಕಮಲಮ್ಮ ಎಸ್‌ಡಿಎಂಸಿ ನಿರ್ಣಯ ದಾಖಲಿಸಲು ನಿರಾಕರಿಸಿ ಸಭೆ ನಡೆಯುತ್ತಿರುವಾಗಲೇ ಸಭೆಯಿಂದ ಹೊರ ಹೋಗಿದ್ದಾರೆ. ಎಸ್‌ಡಿಎಂಸಿ ನಡಾವಳಿಯನ್ನು ತಿರಸ್ಕರಿಸಿದ್ದಾರೆ. ಶಾಲೆಗೆ ಭೇಟಿ ನೀಡುವ ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರಿಗೆ ಶಿಕ್ಷಕಿಯರು ಗೌರವ ನೀಡುತ್ತಿಲ್ಲ. ಶಾಲೆ ಆವರಣಕ್ಕೆ ಬರುವವರ ವಿಡಿಯೋ ಮಾಡಿಕೊಳ್ಳುತ್ತಾರೆ. ಇವರಿಂದ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಅಧಿಕಾರಿಗಳು ಕೂಡಲೇ ಈ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥ ಕೆ.ಆರ್.ಲೋಕೇಶ್ ಮಾತನಾಡಿ, ಈ ವರ್ಷದ ಜನವರಿಯಲ್ಲಿ ಶಾಲೆ ಮಕ್ಕಳ ಬಿಸಿಯೂಟದ ಆಹಾರ ಧಾನ್ಯ ಮತ್ತು ಹಾಲಿನ ಪುಡಿಯನ್ನು ಬೇರೆಡೆಗೆ ಸಾಗಿಸಲು ಮುಖ್ಯಶಿಕ್ಷಕಿ ಯತ್ನಿಸಿದಾಗ, ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರ ವಿರುದ್ಧ ಮುಖ್ಯಶಿಕ್ಷಕಿ ವಿರುದ್ಧ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಮುಖ್ಯಶಿಕ್ಷಕಿಯನ್ನು ಬೇರೆ ನಿಯೋಜನೆ ಮೇರೆಗೆ ಬೇರೆ ಶಾಲೆಗೆ ಕಳುಹಿಸಿದ್ದರು. ಆದರೆ ಜೂನ್‌ನಲ್ಲಿ ಆ ಶಿಕ್ಷಕಿ ಮತ್ತೆ ಇದೆ ಶಾಲೆಗೆ ಬಂದಿದ್ದಾರೆ. ಜಗಳ ಎಂದಿನಂತೆ ಮುಂದುವರಿದಿದೆ. ಕೂಡಲೇ ಶಿಕ್ಷಕೀಯರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಈಗ ದಾಖಲಾಗಿರುವ ವಿದ್ಯಾರ್ಥಿಗಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿಸಲು ಪಾಲಕರು ಮುಂದಾಗಿದ್ದಾರೆ ಕೂಡಲೇ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೇರೆ ಶಿಕ್ಷಕರನ್ನು ಈ ಶಾಲೆಗೆ ನೇಮಿಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net