

ಕೆರೂರ: ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ವೀಕ್ಷಿಸಿದರು.
ಪಟ್ಟಣದಲ್ಲಿ ನಿರಂತರವಾಗಿ ಸುರಿದ ಮಳೆಗೆ 14 ಮನೆಗಳು ಕುಸಿತಗೊಂಡಿವೆ. ಕೆಲವು ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹಲವು ಮನೆಗಳು ಸೋರುತ್ತಿರುವುದರಿಂದ ದೈನಂದಿನ ಜೀವನ ನಡೆಸಲು ಕುಟುಂಬಗಳು ಪರದಾಡುವಂತಾಗಿದೆ.
ಹೊಸಪೇಟೆ, ಕಿಲ್ಲಾ ಪೇಟೆ, ಖಾಜಿ ಓಣಿ, ಹಳಪೇಟೆ ಬಡವಾಣೆಗಳಲ್ಲಿ ಹಾನಿಯಾಗಿರುವ ಮನೆಗಳಿಗೆ ಪಟ್ಟಣ ಪಂಚಾಯಿತಿ ಇಂಜಿನಿಯರ್ ಎಂ.ಐ.ಹೊಸಮನಿ, ಉಪತಹಸೀಲ್ದಾರ್ ವಿರೇಶ ಬಡಿಗೇರ, ಕಂದಾಯ ನಿರೀಕ್ಷಕ ಆನಂದ ಭಾವಿಮಠ ಭೇಟಿ ನೀಡಿದರು.
ನಮ್ಮದು ನೇಕಾರಿಕೆ ಕುಟುಂಬ. ಬಿಡುವಿಲ್ಲದೆ ಮಳೆ ಸುರಿದಿದ್ದರಿಂದ ಮನೆ ಛಾವಣಿ ಕುಸಿದಿದೆ. ಕೈಮಗ್ಗದ ಸಾಮಗ್ರಿ ಹಾನಿಗೀಡಾಗಿವೆ ಎಂದು ಹೇಮಾವತಿ ತಂಬೂರಿ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.
ಹಾನಿಗೀಡಾದ ಪ್ರದೇಶಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು, ಮನೆಗಳು ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ನಿಯಮಾನುಸಾರ ಹಾನಿಯಾದ ಮನೆಗಳಿಗೆ ಪರಿಹಾರ ಹಂಚಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಇನ್ನೂ ಮಳೆಯಾಗುವ ಸಾಧ್ಯತೆ ಇದ್ದು, ಅಪಾಯದಲ್ಲಿರುವ ಮನೆಗಳ ಕುಟುಂಬಸ್ಥರು ಮುಂಜಾಗ್ರತೆ ಕ್ರಮವಾಗಿ ಬೇರೆ ಕಡೆ ಸ್ಥಳಾಂತರಗೊಳ್ಳಲು ಅಧಿಕಾರಿಗಳು ಸೂಚಿಸಿದರು.
ಕೆರೂರ ಗ್ರಾಮ ಆಡಳಿತ ಅಧಿಕಾರಿ ಇಕ್ಬಾಲ್ ಮುಲ್ಲಾ, ಗ್ರಾಮ ಸಹಾಯಕ ಪ್ರದೀಪ ತುಳಸಿಗೇರಿ ಇದ್ದರು.