

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸಲು ಅವಕಾಶ ಇಲ್ಲ. ಒಂದು ವೇಳೆ ಯಾರಾದರೂ ಅನರ್ಹರು ಅನಧಿಕೃತವಾಗಿ ಚಿಕಿತ್ಸೆ ನೀಡಿರುವುದು ಅರಿವಿಗೆ ಬರುತ್ತಿದ್ದಂತೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಜನರಿಗೆ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಭವನದ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಕೆ.ಪಿ.ಎಂ.ಇ ಹಾಗೂ ಪಿಸಿ ಅಂಡ್ ಪಿ.ಎನ್.ಡಿ.ಟಿ ನೋಂದಣಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲ ಆರೋಗ್ಯ ಸಂಸ್ಥೆಗಳು ಸಹ ಕಡ್ಡಾಯವಾಗಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿಯಾಗಿರಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸಬೇಕು. ಅನಧಿಕೃತ ಸಂಸ್ಥೆಗಳು ಹಾಗೂ ಅನರ್ಹ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರರೆಡ್ಡಿ, ಜಿಲ್ಲಾ ಐಎಂಎ ಅಧ್ಯಕ್ಷ ಡಾ. ಅನಂತು, ಜಿಲ್ಲಾ ಆಯುಷ್ ಅಧಿಕಾರಿ ಡಾ. ತಬೀಬಾ ಬಾನು ಮತ್ತಿತರರು ಇದ್ದರು.
*ನಕಲಿ ವೈದ್ಯರ ವಿರುದ್ಧ ಕ್ರಮ
ಜಿಲ್ಲಾದ್ಯಂತ 40 ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಗುರುತಿಸಲಾಗಿದೆ. ಈಗಾಗಲೇ ವೈದ್ಯಕೀಯ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಅನಧಿಕೃತವಾಗಿ ಕ್ಲಿನಿಕ್ ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಶಿಡ್ಲಘಟ್ಟ ತಾಲೂಕಿನ ಭಾಗ್ಯಮ್ಮಗೆ 75,000 ರೂ, ವೆಂಕಟಪ್ಪಗೆ 50,000 ರೂ, ಮಣಿಕಂಠಗೆ 20,000 ರೂ, ಶ್ರೀರಾಮರೆಡ್ಡಿಗೆ 25,000 ರೂ ಹಾಗೂ ಚಿಂತಾಮಣಿ ತಾಲೂಕಿನ ರಮಾದೇವಿಗೆ 20,000 ರೂ ದಂಡವನ್ನು ವಿಧಿಸಲಾಗಿದೆ. ಹಾಗೆಯೇ ನಿಯಮಾನುಸಾರ ನಕಲಿ ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ.