ಪಪಂನಲ್ಲಿ ಅಧಿಕಾರಿಗಳ ದರ್ಬಾರ್

sabhe
ಸಾಲಿಗ್ರಾಮ ಪಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರ ಆಡಳಿತಕ್ಕೆ ಕತ್ತರಿ ಬಿಳುತ್ತಿದೆಯೇ? ಇದಕ್ಕೆ ಪರ್ಯಾಯವಾಗಿ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆಯೇ? ಎಂದು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಆಕ್ಷೇಪ ವ್ಯಕ್ತಪಡಿಸಿದರು.

ಸಾಲಿಗ್ರಾಮ ಸುಧೀಂದ್ರ ಐತಾಳ್‌ರವರ ಪ್ರಾಣಿ ರಕ್ಷಣಾ ಘಟಕಕ್ಕೆ ಪೇಟಾ ದೂರಿನನ್ವಯ ದಾಳಿಯಲ್ಲಿ ಪಪಂ ಅಧ್ಯಕ್ಷ ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ತೆರವು ಕಾರ್ಯ ನಡೆಸಲಾಗಿದೆ. ಅಧ್ಯಕ್ಷ ಅಧಿಕಾರ ಮೊಟಕುಗೊಳಿಸುವ ಅಥವಾ ನಿಯಮ ಗಾಳಿಗೆ ತೂರುವ ತಂತ್ರ ಫಲಿಸದು, ಇಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳ ನಿರ್ಧಾರವೇ ಅಂತಿಮ ಎಂದರು.

ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪಪಂ ಕಂದಾಯ ವಿಭಾಗ ಅಧಿಕಾರಿ ದೀಪಕ್ ಎಂ. ಮಾಹಿತಿ ನೀಡಿ, ಇಲ್ಲಿ ಜನಪ್ರತಿನಿಧಿಗಳ ನಿಯಮ ಗಾಳಿಗೆ ತೂರಲಾಗಿಲ್ಲ; ಬದಲಾಗಿ ಆ ದಿನ ಅವರಿಗೆ ಮಾಹಿತಿ ನೀಡಲಾಗಿದ್ದು, ಕಾರಣಾಂತರಗಳ ಅನುಪಸ್ಥಿತಿಯಲ್ಲಿ ನಾವು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಿವಿಧ ಇಲಾಖೆಯೊಂದಿಗೆ ಭಾಗಿಯಾಗಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಗ್ರಾಪಂ ಗ್ರಾಮಸಭೆಗೆ ಎಲ್ಲ ಇಲಾಖಾಧಿಕಾರಿಗಳು ಭಾಗವಹಿಸುತ್ತಾರೆ, ಆದರೆ ಪಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಎಲ್ಲಿ? ಯಾಕೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗುತ್ತಿಲ್ಲವೇ ಎಂದು ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಆಕ್ಷೇಪಿಸಿ, ಪ್ರತಿ ಬಾರಿ ಈ ರೀತಿಯ ಪ್ರಸಂಗ ಎದುರಾಗದಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಸಭೆಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸುವ ಬಗ್ಗೆ ಅಧಿಕಾರಿ ದೀಪಕ್ ಉತ್ತರಿಸಿದರು.

ಪಪಂ ಅಧ್ಯಕ್ಷೆ ಸುಕನ್ಯಾ ಜಗದೀಶ್, ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಸೂರ್ಯಾ ಹೇರ್ಳೆ, ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚು ಸುಂಕ ಹೇರಬೇಡಿ

ಸಾಲಿಗ್ರಾಮ ಮೀನು ಮಾರುಕಟ್ಟೆ ಮಹಿಳಾ ಮೀನುಗಾರರಿಗೆ ಹೆಚ್ಚು ಸುಂಕದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶ್ರೀನಿವಾಸ್ ಅಮೀನ್, ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗಾರರಿಲ್ಲ ಅವರಿಗೆ ಹೆಚ್ಚು ಸುಂಕ ಹೇರದಂತೆ ಆಗ್ರಹಿಸಿದರು. ಈ ಸಂಬಂಧ ಆಡಳಿತ ಪಕ್ಷದ ನಾಯಕರು ಮಾರುಕಟ್ಟೆಯಲ್ಲಿ ಹೆಚ್ಚು ಸುಂಕ ವಸೂಲು ಮಾಡದಂತೆ ಆಗ್ರಹಿಸಿದರು.

ನೀರಿನ ಸಮಸ್ಯೆಯಾಗದಿರಲಿ

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಹಾಗೂ ಪಪಂ ವ್ಯಾಪ್ತಿಯ ಪಾರಂಪಳ್ಳಿ ವ್ಯಾಪ್ತಿಯ ಭಾವಿ ಸ್ವಚ್ಛಗೊಳಿಸಿ ಪ್ರಸ್ತುತ ನೀರು ಕುಡಿಯುವ ಸ್ಥಿತಿಯಲ್ಲಿ ಇಲ್ಲವಾಗಿದೆ ಎಂದು ಸದಸ್ಯ ಪುನೀತ್ ಪೂಜಾರಿ ಸಲಹೆ ನೀಡಿದರು. ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಅಭಿವೃದ್ಧಿಯಾಗಿಲ್ಲ ತ್ಯಾಜ್ಯ ಘಟಕ ಸ್ಥಳ

ಸಾಲಿಗ್ರಾಮ ಪಪಂ ತ್ಯಾಜ್ಯ ಘಟಕ ಸ್ಥಳ ಸಿಆರ್‌ಜಡ್ ನಿಯಮದಿಂದ ಅದರ ಅಭಿವೃದ್ಧಿ ಮರೀಚಿಕೆಯಾಗಿದೆ. ಆದರೆ ರಸ್ತೆ ಬೀಚ್ ಸಮೀಪ ರೇಸಾರ್ಟ್ ಕಟ್ಟಡ ತಲೆಯೆತ್ತುತ್ತಿದೆ ಹಾಗಾದರೆ ಅವರಿಗೆ ಸಿಆರ್‌ಜಡ್ ನಿಯಮ ಇಲ್ಲವೇ ಎಂದು ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಪ್ರಶ್ನಿಸಿದರು. ಉತ್ತರಿಸಿದ ಪಪಂ ಇಂಜಿನಿಯರ್ ಸಂಬಂಧಪಟ್ಟ ಇಲಾಖೆ ಮೂಲಕ ಎನ್‌ಒಸಿ ಲೈಸೆನ್ಸ್ ಪಡೆದು ಕಟ್ಟುತ್ತಿದ್ದಾರೆ, ಎಂದಾಗ ಬಡವರಿಗೆ ಶ್ರೀಮಂತರಿಗೊಂದು ಕಾನೂನು ಸರಿಯಲ್ಲ ಇನ್ನು ಸಿಆರ್‌ಜಡ್ ವ್ಯಾಪ್ತಿಯಲ್ಲಿ ಎಲ್ಲರಿಗೂ ಲೈಸೆನ್ಸ್ ನೀಡಿ ಎಂದು ಆಗ್ರಹಿಸಿದರು. ಅಧಿಕಾರಿ ದೀಪಕ್ ಸಹಮತ ವ್ಯಕ್ತಪಡಿಸಿ ಸಭೆ ನಿರ್ಧಾರದಂತೆ ಕ್ರಮಕೈಗೊಳ್ಳಲ್ಲದ್ದೇವೆ ಎಂದರು.

ಅಧಿಕ ಬ್ಯಾನರ್ ಶುಲ್ಕ ಕಡಿತ

ಸಾಲಿಗ್ರಾಮ ಪಪಂ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸುವ ಅಥವಾ ಅದಕ್ಕೆ ಶುಲ್ಕ ಪರಿಷ್ಕರಿಸಿದ ಬಗ್ಗೆ ಆಕ್ಷೇಪಿಸಿದ ಆಡಳಿತ ಪಕ್ಷದ ಶ್ಯಾಮಸುಂದರ್ ನಾಯರಿ, ಮನಬಂದಂತೆ ಶುಲ್ಕ ವಿಧಿಸಬೇಡಿ. ಸಂಘ ಸಂಸ್ಥೆ, ಧಾರ್ಮಿಕ ಕಾರ್ಯಗಳ ಪ್ರಚಾರದ ಬ್ಯಾನರ್ ದೇಣಿಗೆ ಮೂಲಕ ಕಾರ್ಯಕ್ರಮ ಆಯೋಜಿಸುತ್ತಾರೆ. ಅವರಿಗೆ ರಿಯಾಯಿತಿ ನೀಡಿ, ಕಮರ್ಷಿಯಲ್ ಬ್ಯಾನರ್‌ಗಳಿಗೆ ಸುಂಕ ಹೆಚ್ಚಿಸಿ ಎಂದರು. ತಿಂಗಳಿಗೆ ಸಂಘ ಸಂಸ್ಥೆಗಳ ಬ್ಯಾನರ್‌ಗೆ ಮಾಸಿಕ 200 ರೂ.ರಂತೆ ಹಾಗೂ ಕಮರ್ಷಿಯಲ್ ಜಾಹೀರಾತು ಫಲಕಗಳಿಗೆ ಪಪಂ ನಿಗದಿಪಡಿಸಿದ ದರಕ್ಕೆ ಸಭೆ ಅಸ್ತು ಎಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net