

ಕುಮಟಾ: ಪಟ್ಟಣದ ರಾಣಿ ಚನ್ನಮ್ಮ ಉದ್ಯಾನದ ಎದುರು ಗುರುವಾರ ಬೆಳಗ್ಗೆ ಸಾರ್ವಜನಿಕರು ಕೇಂದ್ರ ಸರ್ಕಾರದ ಭಾರತ ಅಕ್ಕಿ-ಬೇಳೆ ಖರೀದಿಸುತ್ತಿದ್ದ ವೇಳೆ ಆಗಮಿಸಿದ ಚುನಾವಣೆ ಅಧಿಕಾರಿಗಳು ನೀತಿ ಸಂಹಿತೆ ನೆಪವೊಡ್ಡಿ ಅಕ್ಕಿ-ಬೇಳೆ ಮಾರಾಟ ಬಂದ್ ಮಾಡುವ ವಿಫಲ ಯತ್ನ ನಡೆಸಿದರು.
ರಾಷ್ಟ್ರೀಯ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂಡಳಿಯಿಂದ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಬಂದಿರುವ ಅಕ್ಕಿ-ಬೇಳೆ ವಾಹನದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಜನ ಜಮಾಯಿಸಿದ್ದರು. ಚುನಾವಣಾ ಕಾರ್ಯನಿರತ ಅಧಿಕಾರಿಗಳು ಬಂದು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ಕಿ ಬೇಳೆ ವಿತರಿಸುವಂತಿಲ್ಲ ಎಂದು ಸೂಚನೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು, ನಾವು ಯಾವುದೇ ಪಕ್ಷದ ಉಚಿತ ಸೌಲಭ್ಯ ಪಡೆಯಲು ಬಂದಿಲ್ಲ. ಸರ್ಕಾರದ ರಿಯಾಯಿತಿ ಆಹಾರ ಧಾನ್ಯವನ್ನು ದುಡ್ಡು ಕೊಟ್ಟು ಖರೀದಿಸುತ್ತಿದ್ದೇವೆ. ಇದರಲ್ಲಿ ನೀತಿ ಸಂಹಿತೆಗೆ ಎಲ್ಲಿಂದ ಅಡ್ಡಿ ಎಂದು ಪ್ರತಿಕ್ರಿಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ, ಇಲ್ಲಿ ಅಕ್ಕಿ-ಬೇಳೆ ಉಚಿತ ವಿತರಣೆ ನಡೆಯುತ್ತಿಲ್ಲ. ಮಾರಾಟ ನಡೆಯುತ್ತಿದೆ. ಹಾಗೆ ನೋಡಿದರೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಮುಂತಾದ ಉಚಿತ ಸವಲತ್ತಿನ ಯೋಜನೆಗಳನ್ನು ನೀತಿ ಸಂಹಿತೆ ಕಾರಣಕ್ಕೆ ಬಂದ್ ಮಾಡಬೇಕಾಗುತ್ತದೆ. ಅಧಿಕಾರಿಗಳು ಮಾರಾಟಕ್ಕೂ, ಉಚಿತ ವಿತರಣೆಗೂ ಇರುವ ವ್ಯತ್ಯಾಸವನ್ನು ಗಮನಿಸದೇ ಜನರನ್ನು ಸರ್ಕಾರದ ಸವಲತ್ತಿನಿಂದ ವಂಚಿಸುವುದು ನ್ಯಾಯೋಚಿತವಲ್ಲ. ಯಾವುದೇ ಕಾರಣಕ್ಕೂ ಭಾರತ ಅಕ್ಕಿ-ಬೇಳೆ ವಿತರಣೆ ತಡೆಯುವಂತಿಲ್ಲ ಎಂದು ತಾಕೀತು ಮಾಡಿದರು. ಬಳಿಕ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೂ ಮಾತನಾಡಿ, ಭಾರತ ಅಕ್ಕಿ- ಬೇಳೆ ಮಾರಾಟಕ್ಕೆ ಅನುವು ಮಾಡಿಕೊಟ್ಟರು.
ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ನೀತಿ ಸಂಹಿತೆ ನೆಪದಲ್ಲಿ ಭಾರತ ಅಕ್ಕಿ ಮಾರಾಟಕ್ಕೂ ನಿರ್ಬಂಧ ವಿಧಿಸುವುದಾದರೆ ಇಂದಿನಿಂದಲೇ ರೇಷನ್ ಅಕ್ಕಿ ಕೊಡುವುದು ನಿಲ್ಲಿಸಬೇಕು. ಪೂರ್ಣ ಕರೆಂಟ್ ಬಿಲ್ ಕಟ್ಟಿಸಿಕೊಳ್ಳಬೇಕು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರದ್ದು, ಮಾಸಿಕ 2000 ರೂ. ರದ್ದು ಮುಂತಾದ ಕ್ರಮಗಳನ್ನು ಚುನಾವಣಾ ಅಧಿಕಾರಿಗಳು ಮಾಡಬೇಕಾಗುತ್ತದೆ. ಭಾರತ ಅಕ್ಕಿ ಮಾರಾಟಕ್ಕೆ ನಿರ್ಬಂಧಿಸುವುದು ಅರ್ತಾಕ ಮತ್ತು ನ್ಯಾಯೋಚಿತವಲ್ಲದ ವಿಚಾರ ಎಂದು ಹೇಳಿದರು.
ಬಳಿಕ ಸಾರ್ವಜನಿಕರು ಸಾಲುಗಟ್ಟಿ ರಿಯಾಯಿತಿ ದರದ ಭಾರತ ಅಕ್ಕಿ, ಬೇಳೆ ಮುಂತಾದವನ್ನು ಖರೀದಿಸಿದರು.