

ಗಜೇಂದ್ರಗಡ: ತಾಲೂಕಿನ ಹಿರೇ ಅಳಗುಂಡಿಯ ಹಳ್ಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಅನ್ವಯ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲಿಸಿ 80 ಮೆಟ್ರಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಕ್ರಮದ ಹಿಂದೆ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ನಮ್ಮೂರಿನ ಹಳ್ಳದಿಂದ ನಿತ್ಯವೂ 15-20 ಟಿಪ್ಪರ್, 50-70 ಟ್ರಾೃಕ್ಟರ್ ಮರಳನ್ನು ತೆಗೆದು ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಆದರೆ, ಅಧಿಕಾರಿಗಳು ಹೆಸರಿಗೆ ಮಾತ್ರ ದಾಳಿ ನಡೆಸಿ ಅಲ್ಪ ಪ್ರಮಾಣದ ಮರಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ನಿತ್ಯವೂ ಹಗಲು-ರಾತ್ರಿ ವಾಹನಗಳ ಅಬ್ಬರ ಜೋರಾಗಿರುತ್ತದೆ. ಆದರೆ, ಸೋಮವಾರ ಮಾತ್ರ ಯಾವುದೇ ವಾಹನಗಳು ಸಂಚರಿಸಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರೆ ಮರಳು ದಂಧೆಕೋರರಿಗೆ ಮೊದಲೇ ದಾಳಿಯ ಮುನ್ಸೂಚನೆ ಸಿಕ್ಕಿತ್ತು ಎನ್ನುವುದು ಸ್ಪಷ್ಟವಾಗಿದೆ ಎಂದು ದೂರಿದರು.
ಹಿರೇ ಅಳಗುಂಡಿ ಹಳ್ಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ‘ವಿಜಯವಾಣಿ’ ಜ. 17ರಂದೇ ವಿಸ್ತೃತ ವರದಿ ಪ್ರಕಟಿಸಿದೆ. ಆದರೂ ಅಧಿಕಾರಿಗಳು ಇಷ್ಟು ದಿನ ಬಿಟ್ಟು ಈಗ ಗ್ರಾಮಕ್ಕೆ ತೆರಳಿ ಪರಿಶೀಲಿಸಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ.
ಸರ್ಕಾರಿ ಜಮೀನಿನಲ್ಲಿ ಮರಳು ಸಂಗ್ರಹ ಮಾಡಲಾಗಿದ್ದು ಅದನ್ನು ವಶಪಡಿಸಿಕೊಂಡು, ಗಣಿ ಮತ್ತು ಭೂ ವಿಜ್ಞಾನನ ಇಲಾಖೆಯವರು 80 ಸಾವಿರ ಅದರ ಮೌಲ್ಯದ ದರ ನಿಗದಿ ಮಾಡಿತ್ತು. ಹೀಗಾಗಿ ಕೆಲವರು 80 ಸಾವಿರ ರೂ. ಇಲಾಖೆಗೆ ಕಟ್ಟಿ ಮರಳನ್ನು ಪಡೆದಿದ್ದಾರೆ.-ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್