ಭಿಕ್ಷುಕರೆಂದು ಗೋರವರನ್ನು ವಶಕ್ಕೆ ಪಡೆದ ಅಧಿಕಾರಿಗಳು

15-01-Shiva-8
ರಾಯಚೂರಿನ ನಿರಾಶ್ರಿತ ಕೇಂದ್ರದಲ್ಲಿ ಭಿಕ್ಷುಕರೆಂದು ಕರೆತಂದ ಮೈಲಾಪುರಕ್ಕೆ ಹೋಗುತ್ತಿದ್ದ ಪಾದಯಾತ್ರಿಗಳು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.
Published on

ರಾಯಚೂರು: ಯಾದಗಿರಿ ತಾಲೂಕಿನ ಮೈಲಾಪುರಕ್ಕೆ ಹರಕೆ ತೀರಿಸಲು ಪಾದಯಾತ್ರೆ ಮೂಲಕ ತೆರಳುತ್ತಿದ್ದ ಗದಗ ಜಿಲ್ಲೆ ಹೊಸಳ್ಳಿ ಗ್ರಾಮದ ಗೋರವರನ್ನು ಭಿಕ್ಷುಕರೆಂದು ವಶಕ್ಕೆ ಪಡೆದು ನಿರಾಶ್ರಿತ ಕೇಂದ್ರಕ್ಕೆ ಕರೆತಂದು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.
ಪ್ರತಿವರ್ಷದಂತೆ ಹೊಸಳ್ಳಿ ಗ್ರಾಮದಿಂದ ಮೈಲಾಪುರ ಗ್ರಾಮಕ್ಕೆ ಪಾದಯಾತ್ರೆ ಮೂಲಕ 25ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಮೈಲಾಪುರ ಗ್ರಾಮಕ್ಕೆ ಮುಟ್ಟುವ ಮುಂಚೆಯೇ ಅಧಿಕಾರಿಗಳು ಪಾದಯಾತ್ರಿಗಳನ್ನು ವಶಕ್ಕೆ ಪಡೆದು ರಾಯಚೂರಿನ ನಿರಾಶ್ರಿತ ಕೇಂದ್ರಕ್ಕೆ ಕರೆತಂದಿದ್ದಾರೆ.
ಅಕಾರಿಗಳ ಕ್ರಮವನ್ನು ಖಂಡಿಸಿ ನಿರಾಶ್ರಿತ ಕೇಂದ್ರದಲ್ಲಿ ಗೋರವರು ಪ್ರತಿಭಟನೆ ನಡೆಸಿದ್ದು, ನಂತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ವಿಚಾರಣೆ ನಡೆಸಿ ವಶಕ್ಕೆ ಪಡೆದವರನ್ನು ಬಿಟ್ಟು ಸ್ವಗ್ರಾಮಗಳಿಗೆ ಕಳುಹಿಸಿ ಕೊಟ್ಟಿದ್ದಾರೆ.
ಕಳೆದ 9 ವರ್ಷಗಳಿಂದ ಹೊಸಳ್ಳಿ ಗ್ರಾಮದಿಂದ ಪಾದಯಾತ್ರೆ ಬರುತ್ತಿದ್ದೇವೆ. ದೇವಸ್ಥಾನಕ್ಕೆ ಹೋಗುವಾಗ ಭಿಕ್ಷುಕರು ಎಂದು ಮೈಲಾಪುರದಿಂದ ರಾಯಚೂರಿಗೆ ಕರೆದು ತಂದಿದ್ದಾರೆ. 9 ಸಾವಿರ ದಂಡ ಪಾವತಿಸಿದರೆ ಬಿಟ್ಟು ಕಳುಹಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪಾದಯಾತ್ರಿ ದೇವಪ್ಪ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net