ಎಳನೀರು ಮಾರುಕಟ್ಟೆ ಅವ್ಯವಸ್ಥೆಗೆ ಅಧಿಕಾರಿಗಳು ಕಾರಣ

21M.D.R.6
ಮದ್ದೂರು ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ನವೀನ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಶೋಕ್ ಎಸ್.ಡಿ.ಜಯರಾಮ್, ಮಹೇಂದ್ರ, ರವಿ ಇದ್ದರು.
Published on

ಮದ್ದೂರು: ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಯ ಅವ್ಯವಸ್ಥೆಗಳಿಗೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ತಿಳಿಸಿದರು.

ಮಂಗಳವಾರ ಪಟ್ಟಣದ ಎಳನೀರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಎಳನೀರು ಮಾರುಕಟ್ಟೆಯು ಹಲವಾರು ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಎಳನೀರು ಸಾಗಣೆ ಮಾಡುವ ಲಾರಿಗಳು ಸೇರಿದಂತೆ ಹಲವಾರು ವಾಹನಗಳು ಬರುತ್ತವೆ. ಸಾವಿರಾರು ರೈತರು, ಕಾರ್ಮಿಕರು ಸೇರಿದಂತೆ ವ್ಯಾಪಾರಸ್ಥರು ಬರುತ್ತಾರೆ. ಕೋಟ್ಯಂತರ ರೂ.ಗಳ ವಹಿವಾಟು ನಡೆಯುತ್ತಿದೆ. ಆದರೆ ನೂರಾರು ಜನರು ಬರುವ ಮಾರುಕಟ್ಟೆಗೆ ಕೇವಲ ಒಂದೇ ಶೌಚಗೃಹವಿದೆ. ಸರಿಯಾದ ಕ್ಯಾಂಟೀನ್ ಸೌಲಭ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಈ ಬಗ್ಗೆ ಎಷ್ಟೋ ಬಾರಿ ಸ್ಥಳೀಯರು ದೂರು ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದರು.

ಮುಂದಿನ ಮೂರು ತಿಂಗಳಿನಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮವಹಿಸದೇ ಇದ್ದರೆ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಎಳನೀರು ಮಾರುಕಟ್ಟೆಯ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಎಸ್.ಡಿ.ಜಯರಾಮ್, ಕಾರ್ಯದರ್ಶಿ ಗೆಜ್ಜಲಗೆರೆ ಮಹೇಂದ್ರ, ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವಿ, ಮುಖಂಡರಾದ ಲಿಂಗರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net