

ಮಡಿಕೇರಿ: ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪ್ರವರ್ಗ ೩ಎ ಕ.ಸಂ.೨ರಲ್ಲಿ ನಮೂದಾಗಿರುವ ಕೊಡಗರು ಎಂಬುದರ ಬದಲಾಗಿ ಕನ್ನಡ ಆವೃತ್ತಿಯಲ್ಲಿ ಕೊಡವ ಎಂದು ಮತ್ತು ಆಂಗ್ಲ ಆವೃತ್ತಿಯಲ್ಲಿ Kodava ಎಂದು ಬದಲಾಯಿಸಿ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಹೇಮಲತರವರು ಸರಕಾರದ ನಿರ್ಧಾರದಂತೆ ಆದೇಶ ಹೊರಡಿಸಿದ್ದಾರೆ.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಅವರ ನೇತೃತ್ವದ ನಿಯೋಗ ಡಾ.ಸಿ.ಎಸ್.ದ್ವಾರಕನಾಥ್ ಅವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ನಿರಂತರವಾಗಿ ಭೇಟಿಯಾಗಿ ಕೊಡಗರು ಬದಲಿಗೆ ಕೊಡವ ಎಂದು ಬದಲಾಯಿಸುವಂತೆ ಮನವಿ ಸಲ್ಲಿಸಿತ್ತು. ಅಲ್ಲದೆ, ಕಳೆದ ೧೪ ವರ್ಷಗಳಿಂದ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟದ ಮೂಲಕ ಗಮನ ಸೆಳೆದು ಸಂವಿಧಾನಿಕ ಹಕ್ಕು ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು. ಅಲ್ಲದೆ ಇತ್ತೀಚೆಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿಯಾಗಿ ನಾಚಪ್ಪ ಚರ್ಚಿಸಿದ್ದರು.
ಸರ್ಕಾರ ಕೊಡವ ಎಂದು ಬದಲಾಯಿಸಿ ಆದೇಶ ಹೊರಡಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಎನ್.ಯು.ನಾಚಪ್ಪ ಅವರು, ಇದು ಸಿಎನ್‌ಸಿ ಸಂಘಟನೆಯ ಐತಿಹಾಸಿಕ ಗೆಲುವಾಗಿದ್ದು, ಸರ್ವ ಕೊಡವರಿಗೆ ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ ಎಂದರು.
ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಸರ್ಕಾರಿ ದಾಖಲೆಗಳಲ್ಲಿ ಕೊಡವ ಎಂದು ನಮೂದಿಸದೆ ಕೊಡಗರು ಎಂದು ಉಲ್ಲೇಖಿಸಿ ವಿಶಿಷ್ಟವಾದ ಕೊಡವ ಜನಾಂಗದ ಅಸ್ತಿತ್ವದ ಬಗ್ಗೆ ಸಂಶಯ ಮೂಡುವಂತೆ ಮಾಡಲಾಗಿತ್ತು. ನಿರಂತರ ಹೋರಾಟದ ಫಲವಾಗಿ ಸರ್ಕಾರ ಕೊಡವರ ಭಾವನೆಗೆ ಸ್ಪಂದಿಸಿ ಅಧಿಕೃತ ಆದೇಶ ಹೊರಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.