

ಗುಳೇದಗುಡ್ಡ: ಪಟ್ಟಣದಲ್ಲಿ ಏ.26ರಂದು ನಡೆಯಲಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರನ್ನು ಬುಧವಾರ ತಾಲೂಕು ಕಸಾಪ ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಅವರ ನಿವಾಸದಲ್ಲಿ ಸನ್ಮಾನ ಮಾಡಿ ಅಧಿಕೃತ ಆಹ್ವಾನ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಾಹಿತಿಗಳಾಗಿ ಹಲವು ಸಜನಾತ್ಮಕ ಕತಿಗಳನ್ನು ರಚಿಸುವುದರ ಜತೆಗೆ ಸಾಹಿತ್ಯ ಚಟುವಟಿಕೆಗಳನ್ನು ಸಂಘಟನೆ ಮಾಡಿದ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಮ್ಮೇಳನವನ್ನು ಹಬ್ಬದಂತೆ ಆಯೋಜನೆ ಮಾಡುತ್ತಿದ್ದು, ಎಲ್ಲ ಕನ್ನಡ ಪರ ಸಂಘಟನೆಗಳು ಕೈ ಜೋಡಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಎಂ. ಜೋಶಿ ಮಾತನಾಡಿ, ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ, ಚಿಂತಕರಾಗಿ, ಉತ್ತಮ ವಾಗ್ಮಿಗಳಾಗಿದ್ದಾರೆ. ಅಂತವರು ಸರ್ವಾಧ್ಯಕ್ಷರಾದುದು ಖುಷಿ ತಂದಿದೆ ಎಂದರು.
ಹಿರಿಯ ಸಾಹಿತಿಗಳಾದ ಎಂ.ಪಿ. ನೀಲಕಂಠಮಠ, ಪ್ರೊ. ಎಸ್.ಐ. ರಾಜನಾಳ, ಎನ್.ಬಿ. ಚಿತ್ರಗಾರ, ಕರವೇ ಅಧ್ಯಕ್ಷ ರವಿ ಅಂಗಡಿ ಮಾತನಾಡಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್. ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ದಂಪತಿಯನ್ನು ಸನ್ಮಾನಿಸಲಾಯಿತು.
ತಾಲೂಕು ಘಟಕದ ಗೌರವ ಕಾರ್ಯದರ್ಶಿ ಯಲ್ಲಪ್ಪ ಮನ್ನಿಕಟ್ಟಿ, ಈರಣ್ಣ ಅಲದಿ,ವಿ.ಕೆ. ಬದಿ, ಸಂಗಣ್ಣ ಚಿಕ್ಕಾಡಿ, ಪರಶುರಾಮ ಮಾದರ, ಪುರುಷೋತ್ತಮ ಝಂವಾರ, ಕೆ.ಎಂ.ಶೆಟ್ಟರ್, ರಾಚಣ್ಣ ಕೆರೂರ, ಶಿವಾನಂದ ಸಿಂದಗಿ, ಮೋಹನ ಕರನಂದಿ ಮುಂತಾದವರಿದ್ದರು.