ಪುರಸಭೆ ಕಚೇರಿಗೆ ಬೀಗ ಜಡಿದು ಸದಸ್ಯರ ಪ್ರತಿಭಟನೆ

mkg
Published on

ಚನ್ನಗಿರಿ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ ಹಾಗೂ ಅಧ್ಯಕ್ಷರು, ಅಧಿಕಾರಿ ವರ್ಗದವರು ಸದಸ್ಯರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪುರಸಭೆ ಸದಸ್ಯರು ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಉಪಾಧ್ಯಕ್ಷೆ ಜರೀನಾಭಿ, ಸೂಳೆಕೆರೆ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಪಟ್ಟಣಕ್ಕೆ ನೀರು ನೀಡುವುದನ್ನು ನಿಲ್ಲಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಬೇರೆ ವ್ಯವಸ್ಥೆ ಮಾಡಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ಹೇಳುತ್ತಾರೆ. ಆದರೆ, ಈವರೆಗೂ ಜನರಿಗೆ ಸರಿಯಾಗಿ ನೀರು ನೀಡಿಲ್ಲ ಎಂದು ಆರೋಪಿಸಿದರು.

ನಿತ್ಯ ಸದಸ್ಯರು ವಾರ್ಡ್‌ಗಳಲ್ಲಿ ಓಡಾಡಲು ಆಗುತ್ತಿಲ್ಲ. ಜನರು ನಮಗೆ ಪ್ರಶ್ನಿಸುತ್ತಾರೆ. ಆದರೆ, ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ನಾವು ಸದಸ್ಯರು ಎಂಬ ಮರ್ಯಾದೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಸಮರ್ಪಕವಾಗಿ ನೀರು ನೀಡುವಂತೆ ಸದಸ್ಯರೆಲ್ಲರೂ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿ ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ನೀರಿನ ಸಮಸ್ಯೆ ಬಗೆಹರಿಸಲು ಸೆ. 30ರಂದು ಅಧ್ಯಕ್ಷರು, ಮುಖ್ಯಾಧಿಕಾರಿಗಳ ಮೂಲಕ ಸಭೆ ಕರೆದಿದ್ದಾರೆ. ಆದರೆ, ಯಾರಿಗೂ ತಿಳಿಸದೇ ಸಭೆಯನ್ನು ಮುಂದೂಡಿದ್ದಾರೆ ಎಂದರು.

ಸಾರ್ವಜನಿಕರು ಪುರಸಭೆಗೆ ಖಾಲಿ ಕೊಡ ತಂದು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಖ್ಯಾರೆ ಎನ್ನುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ಸದಸ್ಯರಾದ ಪಟ್ಲಿ ನಾಗರಾಜ್, ಮೊಟ್ಟೆ ಚಿಕ್ಕಣ್ಣ, ಪಾರಿ ಪರಮೇಶ್, ಸವಿತಾ ರಾಘವೇಂದ್ರ, ಲತಾ ಶಿವಕುಮಾರ್, ನೂರ್‌ಜಾನ್, ಗ್ರಾದಿ ರಾಜು, ಕಮಲ ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net