ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಅಮಾನತು

lng officers
Published on

ಲಿಂಗಸುಗೂರು: ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ರವಿ ಸಿರಗುಪ್ಪಿ, ಕಂದಾಯ ಅಧಿಕಾರಿ ಅಶೋಕ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಖಯಾಜ್ ಅವರನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪಟ್ಟಣದ ಹುಲಿಗುಡ್ಡ ಶಿವಾರದ ಸರ್ವೇ ನಂ. 10/1/1, 10/2/1, 10/1/13 ಒಟ್ಟು 9.32 ಎಕರೆ ಜಮೀನಿನ ಅನುಮೋದಿತ ಲೇಔಟ್‌ನಲ್ಲಿ ಉದ್ಯಾನ ಮತ್ತು ಬಯಲು ಜಾಗಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ ನಕಲಿ ದಾಖಲೆ ಸೃಷ್ಟಿಸಿ 9 ಅನಧಿಕೃತ ನಿವೇಶನ ಮಾಡಿ ಫಾರ್ಮ್ 3 ನೀಡಲಾಗಿದೆ ಎಂದು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಸೇರಿದಂತೆ ಕೆಲವರು ಸೆ.3ರಂದು ಡಿಸಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಪರಿಶೀಲಿಸಿದಾಗ ಅನುಮೋದಿತ ವಿನ್ಯಾಸದಲ್ಲಿರುವ 167 ನಿವೇಶನಗಳಿಗೆ ಮಾತ್ರ ನಮೂನೆ-3 ಅನ್ನು ನೀಡಲು ಅವಕಾಶವಿರುತ್ತದೆ. ಆದರೆ, ಉದ್ಯಾನ ಮತ್ತು ಬಯಲು ಸ್ಥಳಕ್ಕಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಎಚ್.ಸುವರ್ಣ, ಸುನೀತಾ, ಸುಚಿತ್ರಾ ಮತ್ತು ಶುಷ್ಮಾ ಅವರ ಹೆಸರಿನಲ್ಲಿ ಜಂಟಿಯಾಗಿ ನಕಲಿ ದಾಖಲೆ ಸೃಷ್ಟಿಸಿ 9 ಅನಧಿಕೃತ ನಿವೇಶನಗಳನ್ನು ಮಾಡಿ ನಮೂನೆ-3 ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ, ಎಫ್‌ಡಿಎಯನ್ನು ಅಮಾನತು ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net