

ದೊಡ್ಡಬಳ್ಳಾಪುರ : ತಾಲೂಕಿನ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ಸ್ಥಳಿಯರು ತರಾಟೆ ತೆಗೆದುಕೊಂಡು ವಾಪಸ್ ಕಳುಹಿಸಿದ್ದಾರೆ.
ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ನೀರು ಸಂಗ್ರಹ ಮಾಡಲು ಜಲಾಶಯ ನಿರ್ಮಾಣಕ್ಕೆ ಲಕ್ಕೇನಹಳ್ಳಿ ಸೇರಿ 5 ಗ್ರಾಮಗಳು ಮುಳುಗಡೆಯಾಗಲಿವೆ. ಈಗಾಗಲೇ ಗ್ರಾಮಗಳ ರೈತರು ಹೋರಾಟ ಪ್ರಾರಂಭಿಸಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಸ್ಥಳಿಯ ರೈತರಿಗೆ ಮಾಹಿತಿ ನೀಡದೆ ಸರ್ವೇ ಕೆಲಸ ನಡೆಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ನರಸಾಪುರ, ವಡೇರಹಳ್ಳಿ, ಬೆಣಚಿಹಟ್ಟಿ ರೈತರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ನರಸಾಪುರದ ರೈತ ಕೆಂಪರಾಜ್, ನಮ್ಮ ಜಮೀನುಗಳಿಗೆ ಯಾವುದೇ ಸೂಚನೆ ನೀಡದೆ ಅಥವಾ ಅಧಿಕೃತ ನೋಟಿಸ್ ನೀಡದೆ ಯಾರೇ ಪ್ರವೇಶಿಸಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ಥಳ ಪರಿಶೀಲನೆ ನೆಪದಲ್ಲಿ ಬಂದಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನಮ್ಮ ಊರು ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ಹಿರಿಯರು ಹುಟ್ಟಿ ಬೆಳೆದಿರುವ ಊರನ್ನು ಜಲಾಶಯದಲ್ಲಿ ಮುಳುಗಡೆಯಾಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿ, ರಾಜ್ಯಪಾಲ, ಸಿಎಂ, ಡಿಸಿಎಂಗೆ ಪತ್ರ : ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಬಾರದು ಎಂದು ಗ್ರಾಮಸ್ಥರು ರಾಷ್ಟ್ರಪತಿ ದ್ರೌಪದಿ ಮುಮುರ್, ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಇತರರಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.