

ಸಿಂಧನೂರು: ನೆರೆಹಾವಳಿ ಯೋಜನೆ (2009-10)ಅಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ ಪ್ರಾಥಮಿಕ ಶಾಲೆ ಕಟ್ಟಡ ಕಾಮಗಾರಿ ಬಿಲ್ ಅನ್ನು ಗುತ್ತಿಗೆದಾರರಿಗೆ ಪಾವತಿಸುವಲ್ಲಿ ವಿಳಂಬ ಮಾಡಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವಾಹನ ಜಪ್ತಿಗೆ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿತ್ತು. ಆದರೆ, ಅಧಿಕಾರಿಗಳು ತಡೆಯಾಜ್ಞೆ ತಂದು ಜಾರಿಕೊಂಡಿದ್ದಾರೆ.
ತಾಲೂಕಿನ ವೀರಾಪುರ ಗ್ರಾಮದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸಪ್ಪ ಪಂಪರೆಡ್ಡೆಪ್ಪ ಹತ್ತಿಗುಡ್ಡ ಅವರು ಗುತ್ತಿಗೆ ಪಡೆದಿದ್ದರು. ಸರ್ಕಾರದ ಆದೇಶದಂತೆ ಪೂರ್ಣ ಕಾಮಗಾರಿ ಮುಗಿಸಿ, ಬಿಲ್ ಪಾವತಿಸುವಂತೆ 11 ವರ್ಷ ಕಚೇರಿಗೆ ಅಲೆ ದಾಡಿದರೂ ಬಿಲ್ ಪಾವತಿ ಆಗಲಿಲ್ಲ. ಇದರಿಂದ ಬೇಸತ್ತು ಗುತ್ತಿಗೆದಾರ ಕೋರ್ಟ್ ಮೊರೆ ಹೋದರು. ಆರಂಭದಲ್ಲಿ ನ್ಯಾಯಾಲಯ ನೋಟಿಸ್ ನೀಡಿದರೂ ಅಧಿಕಾರಿಗಳು ಹಾಜರಾಗಿರಲಿಲ್ಲ. ಹೀಗಾಗಿ ಪ್ರಕರಣದ ದಾಖಲೆಗಳನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ಏಕಪಕ್ಷೀಯ ಆದೇಶದೊಂದಿಗೆ ಒಟ್ಟು ಬಿಲ್ ಬಾಕಿ ಮೊತ್ತ 2,12,756 ರೂ.ಗೆ 2010 ರಿಂದ ಬಡ್ಡಿ ಸೇರಿಸಿ ಒಟ್ಟು 8,22,516 ರೂ. ಗುತ್ತಿಗೆದಾರರಿಗೆ ನೀಡಬೇಕೆಂದು 2025ರ ಮಾ.15ರಂದು ಕೋರ್ಟ್ ಆದೇಶಿಸಿತ್ತು.
ಆದರೆ, ಇಲಾಖೆ ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಿಸಿದ್ದರು. ಆದ್ದರಿಂದ ಗುತ್ತಿಗೆದಾರ ಮತ್ತೆ ಕೋರ್ಟ್‌ಗೆ ಹೋದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, 2025ರ ಜು.10ರಂದು ಜಿಪಂ ಸಿಇಒ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಇಇ, ಎಇಇ ಸಿಂಧನೂರು ಅವರ ವಾಹನಗಳ ಜಪ್ತಿಗೆ ವಾರಂಟ್ ಹೊರಡಿಸಿತ್ತು.
ಹೀಗಾಗಿ ಗುತ್ತಿಗೆದಾರ ಪರ ವಕೀಲ ಮಿಥುನ್ ಜು.15ರಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿಗೆ ಬಂದು ವಾಹನಗಳ ಜಪ್ತಿ ಮಾಡಿಕೊಂಡಿದ್ದಾರೆ. ಅಷ್ಟರೊಳಗೆ ಅಧಿಕಾರಿಗಳು ಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ.