ಸೋಂಕು ತಗುಲಿದರೂ ತಿರುಗಿ ನೋಡದ ಅಧಿಕಾರಿಗಳು

21mdkj5
Published on

ಕುಶಾಲನಗರ: ತೊರೆನೂರು ಗ್ರಾಮದ ವ್ಯಕ್ತಿಗೆ ಕರೊನಾ ಸೋಂಕು ತಗುಲಿ 8 ದಿನ ಕಳೆದಿದ್ದರೂ ಗ್ರಾಮದ ಜನರ ಆರೋಗ್ಯ ರಕ್ಷಣೆ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಂಕು ದೃಢಪಟ್ಟ ತಕ್ಷಣ ನಿರ್ಬಂಧಿತ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಿಲ್ಲ. ನಿರ್ಬಂಧಿತ ಪ್ರದೇಶದ ಜನರಿಗೆ ಕರೊನಾ ಸೋಂಕು ಹರಡುವ ಕುರಿತು ಜಾಗೃತಿ ಮೂಡಿಸುವುದಾಗಲಿ, ಕಂಟೇನ್ಮೆಂಟ್ ಪ್ರದೇಶದ ಬಡ ಜನರು, ಕೂಲಿ ಕಾರ್ಮಿಕರ ಬದುಕು ಬವಣೆ ಬಗ್ಗೆ ಗಮನ ಹರಿಸಲಿಲ್ಲ ಎಂದು ದೂಷಿಸಿದ್ದಾರೆ.

ಗ್ರಾಮದಲ್ಲಿ ರೈತ ಕುಟುಂಬ, ಕೂಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿದ್ದಾರೆ. ಬಡ ಕುಟುಂಬ ದಿನಸಿ, ತರಕಾರಿಗೆ ಪರಿತಪಿಸುವಂತಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಬವಣೆ ಪಡುವಂತಾಗಿದೆ.

8 ದಿನ ಹಿಂದೆ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ನಂತರ ನಿರ್ಬಂಧಿತ ಪ್ರದೇಶದಲ್ಲಿ ಮತ್ತೊಬ್ಬ ವೃದ್ಧ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಆ ಸಂದರ್ಭ ಮೃತ ಮಹಿಳೆಯ ಮನೆಗೆ ಮಾತ್ರ ಸೋಂಕು ನಿವಾರಕ ಔಷಧ ಸಿಂಪಡಿಸಿ ಆಡಳಿತ ವ್ಯವಸ್ಥೆ ಕೈತೊಳೆದುಕೊಂಡಿತು.

ಆದರೆ ಮೊದಲನೇ ವ್ಯಕ್ತಿಗೆ ಕಾಣಿಸಿಕೊಂಡ ಸೋಂಕು ಸಂದರ್ಭವೇ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕಟ್ಟುನಿಟ್ಟಾಗಿ ಕೈಗೊಂಡಿದ್ದರೆ ಮನೆ ಮನೆಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದ್ದರೆ ತೊರೆನೂರು ಗ್ರಾಮದಲ್ಲಿ 5 ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದಿತ್ತೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಒಂದು ಪ್ರದೇಶ ಸೀಲ್ಡೌನ್ ಮಾಡಿರುವ ಕಾರಣ ರೈತಾಪಿ ವರ್ಗ, ಬಡ ಕೂಲಿಕಾರ್ಮಿಕರಿಗೆ ಅಗತ್ಯ ವಸ್ತು ಖರೀದಿಗೆ ಹಣವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥರ ಪರವಾಗಿ ಮಾತನಾಡಿದ ಸ್ಥಳೀಯ ನವಾಸಿ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net