

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಗರೀಕರಣದತ್ತ ವೇಗವಾಗಿ ಬೆಳೆಯುತ್ತಿರುವ ಗ್ರಾಮಾಂತರ ಜಿಲ್ಲೆ ಕೈಗಾರೀಕರಣದತ್ತಲೂ ನಾಗಲೋಟದಲ್ಲಿ ಸಾಗಿದೆ. ಭವಿಷ್ಯದಲ್ಲಿ ಈ ಭಾಗದಲ್ಲಿ ನೀರಿನ ಕೊರತೆ ನೀಗಿಸುವುದು ಸೇರಿ ನೀರಿನ ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ಮೇಲ್ದರ್ಜೆಗೇರಿಸುವ ಸಂಬಂಧ ಜಿಲ್ಲಾ ಪಂಚಾಯಿತಿ ಯೋಜನಾ ವಿಭಾಗದ ಅಧಿಕಾರಿಗಳು ಕೇಂದ್ರ ಜಲ ಶಕ್ತಿ ತಂಡದ ಮೂಲಕ ಕೇಂದ್ರಕ್ಕೆ ಮನವಿ ಮಾಡಿದೆ.
ದೇವನಹಳ್ಳಿ ತಾಲೂಕು ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿದ ಕೇಂದ್ರ ಜಲ ಶಕ್ತಿ ಮಂತ್ರಾಲಯ ತಂಡಕ್ಕೆ ಈ ಬಗ್ಗೆ ಅಧಿಕಾರಿಗಳು ಮನವರಿಗೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ದೊಡ್ಡಬಳ್ಳಾಪುರ ತಾಲೂಕು ಕೈಗಾರಿಕಾ ಪ್ರದೇಶವಾಗಿ ವೇಗವಾಗಿ ವಿಸ್ತರಣೆಯಾಗುತ್ತಿದ್ದು, ಜಿಲ್ಲೆಯಲ್ಲಿನ ನೀರಿನ ತಪಾಸಣಾ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿದೆ ಎಂದು ಅಧಿಕಾರಿಗಳು ತಂಡದ ಗಮನಕ್ಕೆ ತಂದಿದ್ದಾರೆ. ಪ್ರಸ್ತುತ ಇರುವ ಜಿಲ್ಲಾ ನೀರಿನ ತಪಾಸಣಾ ಲ್ಯಾಬ್‌ಗೆ ಮುಂದಿನ ದಿನಗಳಲ್ಲಿ ಒತ್ತಡ ಹೆಚ್ಚಾಗಲಿದೆ ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕಯುಕ್ತ ನೀರಿನ ತಪಾಸಣೆ ಅವಶ್ಯಕವಾಗಿದೆ. ಇದಕ್ಕಾಗಿ ಬೆಂಗಳೂರು ಸೇರಿ ಇನ್ನಿತರ ಕಡೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಲಿದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ವಾಟರ್ ಟೆಸ್ಟಿಂಗ್ ಲ್ಯಾಬ್‌ನ್ನು ಅಪ್‌ಗ್ರೇಡ್ ಮಾಡುವ ಸಂಬಂಧ ಕೇಂದ್ರದ ತಂಡದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಮನೆಯಲ್ಲಿ ಮಳೆಕೊಯ್ಲು: ಗ್ರಾಮಾಂತರ ಜಿಲ್ಲೆ ಯಾವುದೇ ನದಿಮೂಲವಿಲ್ಲದೆ ಇರುವ ಕಾರಣ ಮಳೆಯಾಶ್ರಿತ ಜಿಲ್ಲೆಯಾಗಿದೆ, ಕುಡಿವ ನೀರು ಸೇರಿ ಬಳಕೆಯ ನೀರಿಗೆ ಸಾಕಷ್ಟು ತೊಂದರೆ ಇದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬಿಗಡಾಯಿಸುವ ಸಂದರ್ಭ ಎದುರಾಗಲಿದ್ದು, ಮನೆ ಮನೆಗೆ ಮಳೆಕೊಯ್ಲು ಯೋಜನೆ ಅನುಷ್ಟಾನ ಸಂಬಂಧ ಅಧಿಕಾರಿಗಳಿಗೆ ಎನ್‌ಆರ್‌ಐಜಿ ಮೂಲಕ ನೆರವಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರತಿ ಮನೆಯಲ್ಲಿ ಸಂಪ್‌ಗಳ ನಿರ್ಮಾಣ ಮಾಡಿ ಅವುಗಳ ಮೂಲಕ ಪಂಪ್ ಮಾಡಿ ನೀರಿನ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದು ಇದರ ಉದ್ದೇಶವಾಗಿದೆ.
ಕಸ ಸಂಸ್ಕರಣೆಗೆ ಮೆಚ್ಚುಗೆ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಘನತ್ಯಾಜ್ಯ ಸಂಸ್ಕರಣೆ ಉತ್ತಮವಾಗಿದೆ ಎಂದು ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ತಂಡ ಸ್ಥಳೀಯರೊಂದಿಗೆ ಕೆಲಕಾಲ ಸಂವಾದ ನಡೆಸಿ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆಗಳ ಅನುಷ್ಟಾನದ ಬಗ್ಗೆ ಮಾಹಿತಿ ಕಲೆಹಾಕಿದೆ. ಸ್ಥಳೀಯರಿಗೆ ಮತ್ತೇನು ಅವಶ್ಯಕತೆ ಯಾವುದರ ಬೇಡಿಕೆ ಇದೆ ಎಂಬುದರ ಮಾಹಿತಿ ಪಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೆರಡು ದಿನದಲ್ಲಿ ಜಾಲಿಗೆ ಭೇಟಿ:
ಆಲೂರು ದುದ್ದನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ತಂಡ ಸಂಜೆ ಮರಳಿದ್ದು, ಇನ್ನೆರಡು ದಿನಗಳಲ್ಲಿ ಜಾಲಿಗೆ ಪಂಚಾಯಿತಿಗೆ ಭೇಟಿ ನೀಡಲಿದೆ ಎಂದು ಜಿಪಂ ಯೋಜನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ: ಆಲೂರು ದುದ್ದನಹಳ್ಳಿ ಪಂಚಾಯಿತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಯಿತು. ಜಲಜೀವನ್‌ಮಿಷನ್ ಯೋಜನೆಯ ರಾಷ್ಟ್ರೀಯ ತಜ್ಞ ಪ್ರೊ ನೋಭಕುಮಾರ್, ವನಿತಾ ತಂಡವು ಗ್ರಾಮ ಪಂಚಾಯತಿ ವ್ಯಾಪಿಯ ಪಂಡಿತಪುರ ಹಾಗೂ ದಿನ್ನೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಡಿ ಮನೆ ಮನೆಗೆ ಗಂಗೆ(ಜೆಜೆಎಂ), ಕುಡಿಯುವ ನೀರಿನ ಘಟಕ, ವೈಯಕ್ತಿಕ ಶೌಚಗೃಹ, ಓವರ್‌ಹೆಡ್ ಟ್ಯಾಂಕ್, ನೀರು ಕಾಲುವೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿತು.