

ರಾಮದುರ್ಗ: ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು. ಸಮಸ್ಯೆ ಸರ್ಕಾರದ ಮಟ್ಟದಲ್ಲಿದ್ದರೆ ಪ್ರಸ್ತಾವನೆ ಸಲ್ಲಿಸಿ, ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕಾಡಳಿತ, ತಾಪಂ, ಪುರಸಭೆ ಸೇರಿ ವಿವಿಧ ಇಲಾಖೆಗಳ ನೇತತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಗರಿಕರು ತಮ್ಮ ಅಹವಾಲುಗಳನ್ನು ಸಮರ್ಪಕವಾಗಿ ಸಲ್ಲಿಸಿದರೆ ಪರಿಹಾರ ನೀಡಲು ಜಿಲ್ಲಾಡಳಿತ ಬದ್ಧವಿದೆ ಎಂದರು.
ಪಟ್ಟಣದ ಬೆಳಗಾವಿ ಮುಖ್ಯರಸ್ತೆ ಪಕ್ಕ ಇರುವ ಎಂಎಸ್‌ಐಎಲ್ ಅಂಗಡಿಯಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಮುಸ್ಲಿಮ ಮುಖಂಡರು ಮನವಿ ಸಲ್ಲಿಸಿದರು. ಪದೇ ಪದೆ ಪ್ರವಾಹಕ್ಕೆ ತುತ್ತಾಗುವ ಚಿಕ್ಕತಡಸಿ, ಹಿರೇತಡಸಿ ಗ್ರಾಮಗಳ ಸ್ಥಳಾಂತರ ಒಳಗೊಂಡಂತೆ ವಿವಿಧ ಗ್ರಾಮಗಳ ಮುಖಂಡರು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
ಜಿಲ್ಲಾಧಿಕಾರಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ತಹಸೀಲ್ದಾರ್ ಪ್ರಕಾಶ ಹೊಳೆಯಪ್ಪಗೋಳ, ತಾಪಂ ಇಒ ಪ್ರವೀಣಕುಮಾರ ಸಾಲಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್‌ಐಗಳಾದ ಸುನೀಲಕುಮಾರ ನಾಯಕ, ಶಿವಾಜಿ ಪವಾರ, ಬಸವರಾಜ ಕೊಣ್ಣೂರೆ, ಹೆಸ್ಕಾಂ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.