ಪಾನ್‌ಶಾಪ್, ಕಿರಾಣಿ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

21adarshkdga1 (1)
Published on

ಮಡಿಕೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಇತ್ತೀಚೆಗೆ ಸೋಮವಾರಪೇಟೆಯ ಪ್ರಮುಖ ಬೀದಿಗಳಲ್ಲಿ ವಿವಿಧ ತಂಬಾಕಿನ ಅಂಗಡಿಗಳು, ಪಾನ್ ಶಾಪ್, ಹೋಟೆಲ್, ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.

ಹೋಟೆಲ್, ಬಾರ್, ಅಂಗಡಿ ಮತ್ತು ಪಾನ್‌ಶಾಪ್‌ಗಳಲ್ಲಿ ಕೋವಿಡ್ ವೈರಸ್ ಹರಡುವುದಕ್ಕೆ ಪ್ರಮುಖ ಕಾರಣವಾದ ಜಗಿಯುವ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಯಿತು. ಸೆಕ್ಷನ್ 4 (60*45) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ.

ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‌ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವುದು (ಸೆಕ್ಷನ್5) ಕಂಡುಬಂದ ಹಿನ್ನೆಲೆ ಕಡಿವಾಣ ಹಾಕಲು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎಂ. ಶಿವಕುಮಾರ್ ತಿಳಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲಾಯಿತು. ಶಾಲೆ ಮತ್ತು ಕಾಲೇಜುಗಳ ಅವರಣದಿಂದ 100 ಗಜಗಳ ಅಂತರದ ಒಳಗಡೆ ಇರುವ ಅಂಗಡಿಗಳಿಗೆ ಕಾನೂನಿನ ಸಲಹೆ ಮತ್ತು ದಂಡ ವಿಧಿಸುವುದರ ಮುಖಾಂತರ ತಂಬಾಕು ಮಾರಾಟವನ್ನು ತೆರವುಗೊಳಿಸಲಾಯಿತು.

ಎಂಟಮಾಲಜಿಸ್ಟ್ ಮಂಜುನಾಥ್, ಜಿಲ್ಲಾ ಸಲಹೆಗಾರರಾದ ಕುಮಾರಿ ಪುನೀತ ರಾಣಿ, ಸಮಾಜ ಕಾರ್ಯಕರ್ತರು ಆರ್.ಮಂಜುನಾಥ್, ಹಿರಿಯ ಪುರುಷ ಆರೋಗ್ಯ ಸಹಾಯಕ ಮಹೇಶ್, ಪೋಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net