

ಅಥಣಿ: ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಸಮಸ್ಯೆ ಎದುರಿಸಿರುವ ಗ್ರಾಮಗಳ ಮಾಹಿತಿ ಪಡೆದು ಪ್ರವಾಹ ಎದುರಿಸಲು ಸನ್ನದ್ಧರಾಗಿರಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ 2025-26ನೇ ಸಾಲಿನ ಪ್ರವಾಹದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪ್ರವಾಹದ ಮುನ್ಸೂಚನೆ ಕಂಡು ಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ನದಿ ದಡದ ಹಾಗೂ ಸೇತುವೆ ಬದಿಯಲ್ಲಿನ ಶಿಥಿಲಾವಸ್ಥೆ ಪತ್ತೆ ಮಾಡಿ ದುರಸ್ತಿಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.
ಪ್ರವಾಹದ ವೇಳೆ ತಾಲೂಕಿನ ಯಾವುದೇ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿನಾಕಾರಣ ರಜೆ ಪಡೆಯಬಾರದು. ಪ್ರವಾಹಪೀಡಿತ ಗ್ರಾಮದ ಜನರಿಗೆ ಊಟ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಂತಹ ಸಮಸ್ಯೆ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಸಿದ್ದರಾಯ ಭೋಸಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಮಾತನಾಡಿದರು. ಸಿಪಿಐ ಸಂತೋಷ ಹಳ್ಳೂರ, ಪ್ರವೀಣ ಹುಣಸಿಕಟ್ಟಿ, ಬಸವರಾಜ ಕಾಗೆ, ಮಲ್ಲಿಕಾರ್ಜುನ ನಾಮದಾರ, ನಿಂಗನಗೌಡ ಬಿರಾದಾರ, ಮಹಮ್ಮದ್ ಖೋತ್ವಾಲ್, ಗುರುನಾಥ ಮಠದ ಇತರರಿದ್ದರು.