ಒಣಗಿದ ಶೇಂಗಾ ವೀಕ್ಷಿಸಿದ ಅಧಿಕಾರಿಗಳು

NYK BARA 07
Published on

ನಾಯಕನಹಟ್ಟಿ: ಬರ ಅಧ್ಯಯನ ತಂಡ ಶನಿವಾರ ನಾಯಕನಹಟ್ಟಿಯಲ್ಲಿ ಜಮೀನು ಮತ್ತು ನರೇಗಾ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ನಲಗೇತನಹಟ್ಟಿ ಗ್ರಾಪಂ ವ್ಯಾಪ್ತಿಯ ಡಿಆರ್‌ಡಿಒ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಗೋಕಟ್ಟೆ ನಿರ್ಮಾಣದ ಕಾಮಗಾರಿಯನ್ನು ಅಧಿಕಾರಿಗಳು ವೀಕ್ಷಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರ ತಂಡದ ಸದಸ್ಯರು ಕಾರ್ಮಿಕರ ಜತೆ ಮಾತುಕತೆ ನಡೆಸಿದರು.

ನರೇಗಾದಲ್ಲಿ ಪ್ರತಿದಿನಕ್ಕೆ 316 ರೂ. ಗಳನ್ನು ಕೂಲಿಯಾಗಿ ನೀಡಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಕೂಲಿ ಕಾರ್ಮಿಕರಿಗೆ 500 ರೂ. ನೀಡುತ್ತಿದ್ದಾರೆ. ಆದ್ದರಿಂದ ನರೇಗಾದಲ್ಲಿಯೂ ಪ್ರತಿದಿನ ಕೂಲಿಯನ್ನು 500 ರೂ. ಗಳಿಗೆ ಹೆಚ್ಚಿಸಬೇಕು ಎಂದು ಸ್ಥಳೀಯರಾದ ಬೋಸಯ್ಯ, ಓಬಣ್ಣ, ಚನ್ನಪ್ಪ ಇತರರು ತಂಡವನ್ನು ಒತ್ತಾಯಿಸಿದರು.

ನಂತರ ಕೃಷಿ ಇಲಾಖೆ ಮ್ಯಾಪಿಂಗ್ ಮಾಡಿದ ಒಣಗಿದ ಶೇಂಗಾ ಹೊಲಕ್ಕೆ ಭೇಟಿ ನೀಡಿ, ಅಲ್ಲಿನ ಬೆಳೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿ, ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಸದಸ್ಯರ ಪ್ರವಾಸ ಪೂರ್ಣಗೊಂಡ ಏಳು ದಿನಗಳಲ್ಲಿ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ವರದಿ ಆಧಾರದ ಮೇಲೆ ಪರಿಹಾರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ರಾಮದುರ್ಗ, ದೊರೆಯಾಗಳ ಹಟ್ಟಿ, ಮನಮೈನಹಟ್ಟಿ ಕ್ರಾಸ್, ನಾಯಕನಹಟ್ಟಿ ಚಿಕ್ಕಕೆರೆ, ಭೀಮಗೊಂಡನಹಳ್ಳಿಗಳಲ್ಲಿ ಶೇಂಗಾ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸಿದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಪಂ ಸಿಇಒ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ, ತಹಸೀಲ್ದಾರ್ ರೆಹಾನ್ ಪಾಷ, ಕೃಷಿ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್, ಉಪಕೃಷಿ ನಿರ್ದೇಶಕ ಬಿ.ಎನ್.ಪ್ರಭಾಕರ್, ಶಿವಕುಮಾರ್, ಕೃಷಿ ಅಧಿಕಾರಿ ಎನ್.ಹೇಮಂತ ನಾಯಕ್, ಉಪ ತೋಟಗಾರಿಕಾ ನಿರ್ದೇಶಕಿ ಜಿ.ಸವಿತಾ, ಸಹಾಯಕ ಕೃಷಿ ನಿದೇಶಕ ಜೆ. ಅಶೋಕ್, ನರೇಗಾ ಎಡಿಎ ಸಂತೋಷ್, ರಾಜಸ್ವ ನಿರೀಕ್ಷಕ ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net