ಲಿಸಲಿಲ್ಲ ಅಧಿಕಾರಿಗಳ ಸಂಧಾನ ಸಭೆ

meeting
ಅಧಿಕಾರಿಗಳ ಸಂಧಾನ ಸಭೆ
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರು ಶುದ್ಧೀಕರಿಸಲು ಮೂರನೇ ಹಂತ ಘಟಕ ಸ್ಥಾಪಿಸುವಂತೆ ಆಗ್ರಹಿಸಿ ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರೊಂದಿಗೆ ಅಧಿಕಾರಿಗಳ ಸಂಧಾನ ಸಭೆ ನಡೆಸಿದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ದೊಡ್ಡಬಳ್ಳಾಪುರ ನಗರಸಭೆಯ ತ್ಯಾಜ್ಯ ನೀರು ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳನ್ನು ಮಲೀನ ಮಾಡಿದ್ದು, ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಪಂನ 18 ಗ್ರಾಮಗಳಲ್ಲಿನ ಅಂತರ್ಜಲ ವಿಷವಾಗಿದೆ. ಶುದ್ಧ ನೀರಿಗಾಗಿ ಆಗ್ರಹಿಸಿ, ಗ್ರಾಮಸ್ಥರು ಹೋರಾಟ ಮಾಡುತ್ತಿದ್ದು, ಅಧಿಕಾರಿಗಳಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಹಾಗೂ ತಾಪಂ ಇಒ ಮುನಿರಾಜು ಮತ್ತು ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಪರಮೇಶ್ವರ್ ಸಂಧಾನ ಸಭೆ ನಡೆಸಿದರು.
ಘಟಕ ಸ್ಥಾಪನೆ ಜತೆಗೆ ಮಳೆ ನೀರು ಕೊಯ್ಲು ಮಾಡಿಕೊಳ್ಳಲು ಪ್ರತಿ ಮನೆಗೆ ಸರ್ಕಾರದಿಂದ ಧನ ಸಹಾಯ ನೀಡಬೇಕು ಎಂದು ಅಧಿಕಾರಿಗಳ ಮುಂದೆ ಗ್ರಾಮಸ್ಥರು ಬೇಡಿಕೆ ಇಟ್ಟರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ಆದೇಶ ಪತ್ರ ಹೊರಡಿಸುವವರೆಗೂ ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ಇದು ಹತ್ತಾರು ವರ್ಷಗಳ ಸಮಸ್ಯೆಯಾಗಿದೆ. ಇದೀಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶುದ್ಧೀಕರಣ ಘಟಕಕ್ಕೆ 4 ಎಕರೆ ಜಮೀನು ಗುರುತಿಸಿದ್ದು, ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಎರಡೂ ಪಂಚಾಯಿತಿಯ 18 ಗ್ರಾಮಗಳಿಗೂ ಜಕ್ಕಲಮಡಗು ಡ್ಯಾಂನಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಜಾನುವಾರುಗಳ ಕುಡಿಯುವ ನೀರಿಗಾಗಿ ಗ್ರಾಮಗಳ ಮುಂಭಾಗದಲ್ಲಿ ನೀರಿನ ತೊಟ್ಟಿಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಸಭೆಯಲ್ಲಿನ ಬೇಡಿಕೆ ವಿಚಾರಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಕೇವಲ ಮೌಖಿಕ ಮಾತಿಗೆ ಒಪ್ಪದ ಗ್ರಾಮಸ್ಥರು ಜಿಲ್ಲಾಧಿಕಾರಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಮಿಸಿ ಆದೇಶ ನೀಡುವವರೆಗೂ ಬಹಿಷ್ಕಾರ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net