ಸಭೆಗೆ ಗೈರು ಅಧಿಕಾರಿಗಳ ಹವ್ಯಾಸ

gan-1
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗ್ರಾಮಸಭೆಗಳ ನಿರ್ಣಯಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಮಸಭೆಯ ಉದ್ದೇಶ ವ್ಯರ್ಥ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಥಿತಿ ಇಲ್ಲದಿದ್ದರೆ ಅಧಿಕಾರಿಗಳು ತಮ್ಮ ಸ್ಥಾನದಲ್ಲಿರುವುದೇಕೆ? ಔಪಚಾರಿಕತೆಗಷ್ಟೇ ಗ್ರಾಮಸಭೆ ಆಯೋಜನೆಗೊಳ್ಳುತ್ತಿದೆ ಎಂದು ಗಂಗೊಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಗಂಗೊಳ್ಳಿಯಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಅಧಿಕಾರಿಗಳ ಉಡಾಫೆ ವರ್ತನೆ ಖಂಡಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನವೀನ್ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ರಾಘವೇಂದ್ರ ಗಾಣಿಗ, ಮೋಹನ ಖಾರ್ವಿ, ವೆಂಕಟೇಶ ಖಾರ್ವಿ ವಿಚಾರ ಪ್ರಸ್ತಾಪಿಸಿ, ಗ್ರಾಮಸಭೆ ಕುರಿತು ಪ್ರಚಾರವೇ ನಡೆಸಿಲ್ಲ. ಅಧಿಕಾರಿಗಳು ಸಭೆಗೆ ಗೈರಾಗುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಿಂದಿನ ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಣಯ ಕಡತಗಳಲ್ಲೇ ಬಾಕಿಯಾಗಿದ್ದು, ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಜತೆಗೆ ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಗಂಗೊಳ್ಳಿ ಮೆಸ್ಕಾಂ ಕಚೇರಿಯಲ್ಲೂ ಸಿಬ್ಬಂದಿ ಕೊರತೆ ಇದ್ದು, ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರವನ್ನು 24*7 ಕೇಂದ್ರವನ್ನಾಗಿ ಮಾರ್ಪಾಡುಗೊಳಿಸಬೇಕು ಗ್ರಾಮಸ್ಥರು ಒತ್ತಾಯಿಸಿದರು.

ಅಧಿಕಾರಿಗಳ ಸಮ್ಮುಖದಲ್ಲಿ ಸಭೆ

ಗೈರಾದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮತ್ತೊಮ್ಮೆ ಗ್ರಾಮಸಭೆ ಆಯೋಜಿಸಬೇಕು. ಅಧಿಕಾರಿಗಳ ಸಮ್ಮುಖದಲ್ಲೇ ಸಮಸ್ಯೆಗಳ ಚರ್ಚೆ ಆಗಬೇಕಿದ್ದು, ಅಧಿಕಾರಿಗಳು ಉತ್ತರಿಸಲೇಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಮೀನುಗಾರಿಕೆ ಇಲಾಖೆಯ ಮಹಾದೇವ ಎನ್.ಎಸ್. ನೋಡಲ್ ಅಧಿಕಾರಿಯಾಗಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಮಿತಾ, ಅಂಗನವಾಡಿ ಮೇಲ್ವಿಚಾರಕಿ ರೇಖಾ, ಗ್ರಾಮ ಆಡಳಿತ ಅಧಿಕಾರಿ ಶಿವರಾಯ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಶೋಭಾ, ಕಾರ್ಯದರ್ಶಿ ಅನೂಪ್ ಶೇಟ್, ಉಪಾಧ್ಯಕ್ಷ ತಬ್ರೇಜ್, ಬಿಆರ್‌ಪಿ ಪ್ರದೀಪ ಕುಮಾರ್ ಶೆಟ್ಟಿ, ಸಿಡಬ್ಲ್ಯುಸಿ ಸಂಸ್ಥೆಯ ಗಣೇಶ ಶೆಟ್ಟಿ, ಕೃಷಿ ಇಲಾಖೆಯ ಗಜೇಂದ್ರ, ಎಎಸ್‌ಐ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು. ನಾರಾಯಣ ಶ್ಯಾನುಭಾಗ್ ಸ್ವಾಗತಿಸಿದರು. ಸಂದೀಪ್ ಖಾರ್ವಿ  ವಂದಿಸಿದರು.

ಮಕ್ಕಳ ಆದಾಯ ಪತ್ರಕ್ಕೆ ಆಕ್ಷೇಪ

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಸಂದರ್ಭ ಸಣ್ಣ ಮಕ್ಕಳ ಆದಾಯ ಪ್ರಮಾಣ ಪತ್ರ ಕೇಳುತ್ತಿದ್ದು, ಇದು ಅತ್ಯಂತ ಬಾಲಿಶವಾಗಿದೆ. ಈ ನಿರ್ಣಯ ರದ್ದುಗೊಳಿಸಬೇಕು. ಆಧಾರ್‌ಕಾರ್ಡ್ ನವೀಕರಣ ಸಂದರ್ಭ ಕೈ ಬರಹದ ಜನನ ಪ್ರಮಾಣಪತ್ರ ತಿರಸ್ಕರಿಸಲಾಗುತ್ತಿದ್ದು, ಹೊಸ ನಮೂನೆ ಪಡೆಯಲು ತಾಲೂಕು ಕಚೇರಿಗೆ ಅಲೆಯಬೇಕು ಎಂದು ಬಿ.ರಾಘವೇಂದ್ರ ಪೈ ಅಸಮಾಧಾನ ಹೊರಹಾಕಿದರು.

ಜಾನುವಾರು ಕಳವಿಗೆ ತಡೆ

ಗಂಗೊಳ್ಳಿ ಪರಿಸರದಲ್ಲಿ ಜಾನುವಾರು ಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು, ಪೊಲೀಸರು ಕ್ರಮಕೈಗೊಳ್ಳಬೇಕು. ರಥಬೀದಿಯಲ್ಲಿ ಅನಧಿಕೃತ ವಾಹನ ನಿಲುಗಡೆ ತಡೆಯಬೇಕಿದ್ದು, ಪರಿಸರವನ್ನು ವಾಹನ ನಿಲುಗಡೆರಹಿತ ಪ್ರದೇಶವಾಗಿ ಘೋಷಿಸಬೇಕೆಂದು ಗ್ರಾಮಸ್ಥರು   ಒತ್ತಾಯಿಸಿದರು.

'

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net