ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

8-kolleagal-2,
ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಮಕ್ಕಾ ಹೋಟೆಲ್ ಮೇಲೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.
Published on

ಕೊಳ್ಳೇಗಾಲ : ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಹೋಟೆಲ್‌ಗಳ ಮೇಳೆ ದಾಳಿ ನಡೆಸಿ ನಿಷೇಧಿತ ಬಣ್ಣ ಬಳಸಿದವರಿಗೆ ದಂಡದ ಬಿಸಿ ಮುಟ್ಟಿಸಿದರು.

ಜು.4 ರಂದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಎಗ್ಗಿಲ್ಲದೆ ಕೃತಕ ಕಲರ್ ಬಳಕೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು, ಸೋಮವಾರ ಮಾಂಸಾಹಾರಿ, ಸಸ್ಯಹಾರಿ ಹೋಟೆಲ್, ಕಬಾಬ್ ಅಂಗಡಿಗಳು, ಬೇಕರಿಗಳು, ಪಾನೀಪುರಿ ಅಂಗಡಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದರು.

ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಫಿಶ್, ಚಿಕನ್ ಕಬಾಬ್‌ಗೆ ಕೃತಕ ಕಲರ್ ಬಳಕೆ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಹೀಗಿದ್ದರೂ ಪಟ್ಟಣದ ಹಲವು ಹೋಟೆಲ್, ತಳ್ಳುಗಾಡಿಗಳು ರಾಜಾರೋಷವಾಗಿ ಕೃತಕ ಬಣ್ಣ ಮಿಶ್ರಿತ ಫಿಶ್, ಚಿಕನ್ ಕಬಾಬ್ ಮಾರಾಟ ಮಾಡುತ್ತಿದ್ದರು. ಇದೀಗ ವರದಿ ಬೆನ್ನಲ್ಲೇ ಪಟ್ಟಣದಲ್ಲಿರುವ 3 ಮಾಂ ಸಹಾರಿ ಹೊಟೇಲ್‌ಗಳು, 2 ಸಸ್ಯಹಾರಿ ಮೆಸ್‌ಗಳು, 3 ಸಸ್ಯಹಾರಿ ಹೋಟೆಲ್‌ಗಳು, 3 ಬೇಕರಿಗಳ ಮೇಲೆ ದಾಳಿ ನಡೆಸಿ ಕೃತಕ ಕಲರಿಂಗ್ ಬಳಕೆ, ಅವಧಿ ಮೀರಿದ ಪದಾರ್ಥಗಳ ಬಳಕೆ ಸೇರಿದಂತೆ ಇತರೆ ನಿಯಮ ಉಲಂಘನೆ ಪ್ರಕರಣಗಳಿಗೆ ನೋಟಿಸ್ ನೀಡಿದ್ದು, 9 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಕೃತಕ ಬಣ್ಣಗಳ ಬಳಕೆ ನಿಷೇಧದ ಬಗ್ಗೆ ಅರಿವು ಮೂಡಿಸಿದ್ದಾರೆ.

ಬಾರ್ ರೆಸ್ಟೋರೆಂಟ್‌ನಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಹೊಟೇಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ, ವ್ಯಾಪಾರ ಪರವಾನಗಿ ಇಲ್ಲದಿರುವುವುದು ಸೇರಿದಂತೆ ಇತ್ಯಾದಿ ನಿಯಮ ಉಲಂಘನೆ ಮಾಡಿರುವವರಿಗೆ 4.500 ರೂ. ದಂಡ ವಿಧಿಸಿದರು. ವರದಿ ಪ್ರಕಟಿಸಿ ಗಮನ ಸೆಳೆದಿರುವುದಕ್ಕೆ ವಿಜಯವಾಣಿ ಪತ್ರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನಗರಸಭೆ ಆರೋಗ್ಯ ನಿರೀಕ್ಷಕ ಚೇತನ್, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಅಧಿಕಾರಿ ಶ್ರೀನಿವಾಸ್, ಕಾರ್ಮಿಕ ನಿರೀಕ್ಷಕ ಪ್ರಸಾದ್, ಫಾಸ್ಟ್ ಟ್ರೆಕ್ ಏಜೆನ್ಸಿಯ ಸಿದ್ದರಾಜು, ಪ್ರಶಾಂತ್, ಪೊಲೀಸ್ ಸಿಬ್ಬಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net