ಫಾಗಿಂಗ್, ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಅಧಿಕಾರಿ ತರಾಟೆಗೆ

15-HNL-1 MANE
Published on

ಹಾನಗಲ್ಲ: ಡೆಂಘೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಫಾಗಿಂಗ್ ಹಾಗೂ ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚನ್ನವೀರಶೆಟ್ಟಿ ರೂಢಗಿ ಅವರನ್ನು ಶಾಸಕ ಶ್ರೀನಿವಾಸ ಮಾನೆ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತ್ರೖೆಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಶಾಸಕ ಮಾನೆ, ಡೆಂಘೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಫಾಗಿಂಗ್, ಸ್ವಚ್ಛತೆ ಸೇರಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಕ್ಕೆ ಸಿಟ್ಟಾದರು. ಸಭೆಗೆ ಟೈಂ ಪಾಸ್ ಮಾಡಲು ನಾನು ಬಂದಿಲ್ಲ. ಪ್ರತಿಯೊಂದು ಗ್ರಾಮಗಳ ಮಾಹಿತಿಯೂ ನನ್ನ ಬಳಿ ಇದೆ. ನೀವೆಲ್ಲ ಎಚ್ಚೆತ್ತು ಅಗತ್ಯ ಕ್ರಮ ಕೈಗೊಂಡಿದ್ದರೆ ಇಷ್ಟೊತ್ತಿಗೆ ಡೆಂಘೆ ನಿಯಂತ್ರಣಕ್ಕೆ ಬರುತ್ತಿತ್ತು. ಸ್ವಚ್ಛತೆ ಕೈಗೊಳ್ಳಬೇಕು. ಸಮುದಾಯ ಜಾಗೃತಿ ಮೂಡಿಸಿ ಎಂದು ಸೂಚಿಸಿ 15 ದಿನಗಳ ನಂತರ ವಿಶೇಷ ಸಭೆ ಮಾಡೋಣ. ಅಲ್ಲಿ ನಿಖರ ಮಾಹಿತಿಯೊಂದಿಗೆ ಬನ್ನಿ. ಡೆಂಘೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ. ಗ್ರಾಪಂಗಳಿಂದ ಸಹಕಾರ ಸಿಗದಿದ್ದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಎಂದು ತಾಕೀತು ಮಾಡಿದರು.

ತಿಳವಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಬರ ಹಾಗೂ ವಿಮಾ ಪರಿಹಾರ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಸಾಲಕ್ಕೆ ಪರಿಹಾರ ಹಣ ಜಮಾ ಮಾಡಿಕೊಳ್ಳದಂತೆ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಏಕೆ ಹೀಗಾಗುತ್ತಿದೆ? ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಅವರನ್ನು ಪ್ರಶ್ನಿಸಿದ ಮಾನೆ, ರೈತರು ಕಷ್ಟದಲ್ಲಿದ್ದಾರೆ. ಮಾನವೀಯತೆಯ ಆಧಾರದಲ್ಲಾದರೂ ಸಹಕಾರ ನೀಡಿ, ಸರ್ಕಾರದ ಆದೇಶ ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಕುಮಾರ ಅವರಿಗೆ ಶಾಸಕರು ಸೂಚಿಸಿದರು. ಕೆಡಿಪಿ ಸದಸ್ಯರಾದ ಸಿಸ್ಟರ್ ಅನಿತಾ ಡಿಸೋಜ, ಮಾರ್ತಾಂಡಪ್ಪ ಮಣ್ಣಮ್ಮನವರ, ರಾಜೇಶ ಚವ್ಹಾಣ, ಪ್ರಕಾಶ ಈಳಿಗೇರ, ಮಹ್ಮದಹನೀಫ್ ಬಂಕಾಪೂರ, ರಾಜಕುಮಾರ ಜೋಗಪ್ಪನವರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ ಗೊಂದಿ, ಇಒ ದೇವರಾಜ ಎಸ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net