

ಮಂಗಳೂರು: ಸ್ಥಳೀಯ ಬಂದರ್‌ನಿಂದ ಗುಜರಾತ್‌ಗೆ ಹೊರಟಿದ್ದ ಎಸ್‌ಎಸ್‌ಎಲ್ ಗಂಗಾ ಹೆಸರಿನ ಕಾರ್ಬೋ ಶಿಪ್‌ನ ಅಧಿಕಾರಿ ಕನ್ಯಾಕುಮಾರಿ ಮೂಲದ ಅಮಲ್ ಜೆವಿಯರ್ ಕೆರಿಬಲ್ ಎಂಬುವರು ಶನಿವಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ.
ಕಾರ್ಬೋ ಶಿಪ್ ಪಣಂಬೂರು ಬಂದರು ವ್ಯಾಪ್ತಿ ದಾಟಿ ಗುಜರಾತ್ ಕಡೆಗೆ 16.08 ನಾಟಿಕಲ್ ಮೈಲ್ ದೂರ ತಲುಪಿದಾಗ ಸಮುದ್ರದಲ್ಲಿ ಭಾರಿ ಚಂಡಮಾರುತ ಎದ್ದ ಪರಿಣಾಮ ಶಿಪ್ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹಡಗಿನ ಕ್ಯಾಪ್ಟನ್ ಲಂಗರು ಹಾಕಲು ತಿಳಿಸಿದರು. ಹಡಗಿನ ಮುಖ್ಯಾಧಿಕಾರಿ ಬೆನಿಲ್ ರಾಮಚಂದ್ರ, ತಮನ್ ದೀಪ್ ಸಿಂಗ್ ಮತ್ತು ಅಮಲ್ ಜೆವಿಯರ್ ಕೆರಿಬಲ್ ಅವರೊಂದಿಗೆ ಸೇರಿಕೊಂಡು ಶಿಪ್‌ನ ಮುಂಭಾಗದ ಡೆಕ್‌ನಲ್ಲಿರುವ ಲಂಗರನ್ನು ಕೆಳಗೆ ಸಮುದ್ರಕ್ಕೆ ಇಳಿಸಲು ಪ್ರಯತ್ನಿಸುತ್ತಿರುವಾಗ ಸಮುದ್ರದ ಭಾರಿ ಅಲೆಗಳು ಒಮ್ಮೆಲೆ ಅಪ್ಪಳಿಸಿತು. ಈ ಸಂದರ್ಭ ಅಮಲ್ ಜೆವಿಯರ್ ಕೆರಿಬಲ್ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾರೆ. ಉಳಿದ 3 ಮಂದಿ ಡೆಕ್‌ನ ಒಳಗಡೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ.
ಹಡಗಿನ ಹಿಂಭಾಗದ ಡೆಕ್‌ನಲ್ಲಿದ್ದ ಇಬ್ಬರೂ ಡೆಕ್‌ನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಶಿಪ್‌ಗೆ ಸಂಬಂಧಿಸಿದವರಿಗೆ ಈ ಮಾಹಿತಿ ನೀಡಿದ್ದಾರೆ. ಆ ಬಳಿಕ ಅಲ್ಲಿಯೇ ಲಂಗರು ಹಾಕಿ ಮರುದಿನ ಭಾನುವಾರ ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ವಾಪಾಸು ಪಣಂಬೂರು ಬಂದರಿಗೆ ಬಂದಿದ್ದಾರೆ. ಅಮೋಘ ಲಾಜಿಸ್ಟಿಕ್ ಏಜೆನ್ಸಿಯ ಸಿಬ್ಬಂದಿ ಗಾಯಾಳುಗಳನ್ನೂ ಆಂಬುಲೆನ್ಸ್‌ನಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಮುದ್ರದಲ್ಲಿ ಬಿದ್ದು ಕಾಣೆಯಾದವರು, 60 ವರ್ಷ, ಎತ್ತರ 5 ಅಡಿ 4 ಇಂಚು, ಸಪುರ ಶರೀರ, ಕಪ್ಪು ಮೈಬಣ್ಣ, ಹೊಂದಿದ್ದು, ಕಿತ್ತಳೆ ಬಣ್ಣದ ಬಾಯ್ಲರ್ ಸೂಟ್ ಧರಿಸಿದ್ದರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.